ಶಿಗ್ಗಾಂವಿ: ತಾಲೂಕಿನ ವಿದ್ಯಾರ್ಥಿಗಳ, ಪ್ರಯಾಣಿಕರ, ಸಾರ್ವಜನಿಕರು ಅನುಕೂಲಕ್ಕಾಗಿ ತಾಲೂಕಿನ ಸಾರಿಗೆ ವ್ಯವಸ್ಥೆ ಬಲಪಡಿಸಲು ಮತ್ತು ಕೆಎಸ್‌ಆರ್‌ಟಿಸಿ ಸೇವೆ ಮತ್ತಷ್ಟು ವಿಸ್ತರಿಸಲು ಹೊಸದಾಗಿ ೧೦ ಬಸ್ ಗಳನ್ನು ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಶಿಗ್ಗಾಂವಿ ಡಿಪೋಗೆ ೧೦ ಹೊಸ ಬಸ್‌ಗಳನ್ನು ಹಸ್ತಾಂತರಿಸಿ, ಹೊಸ ಮಾರ್ಗಗಳಿಗೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ೧೫ ಕ್ಷೇತ್ರಕ್ಕೆ ಈಗಾಗಲೇ ೧೦ ಹೊಸ ಬಸ್ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಒದಗಿಸಲಾಗುವುದು ಎಂದರು.

ಶಿಗ್ಗಾಂವಿ ಡಿಪೋ ಕಾರ್ಯಾಚರಣೆ ಅಧಿಕೃತವಾಗಿ ಆರಂಭಗೊಂಡಿದೆ. ನೂತನ ಡಿಪೋ ಮ್ಯಾನೇಜರ್ ನೇಮಕವಾಗಿದ್ದು, ಕಾರ್ಯನಿರ್ವಹಣೆಗೆ ೩೨ ಸಿಬ್ಬಂದಿ ನಿಯೋಜಿಸಲಾಗಿದೆ. ಇದೇ ವರ್ಷದಿಂದ ಡಿಪೋದಲ್ಲಿ ತರಬೇತಿ ಕೇಂದ್ರವನ್ನೂ ಪ್ರಾರಂಭಿಸಲಾಗುವುದು. ಸಾರ್ವಜನಿಕರ ಹಾಗೂ ಪ್ರಯಾಣಿಕರ ಬೇಡಿಕೆಯಂತೆ ಶಿಗ್ಗಾವಿಯಿಂದ ಬೆಂಗಳೂರಿಗೆ ನೇರ ''ಸ್ಟೀರ್ಪ'' ಬಸ್ ಸೇವೆ ಒದಗಿಸಲು ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗುವುದು. ಅಲ್ಲದೇ ರಾತ್ರಿ ವೇಳೆ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಚಲಿಸುವ ರಾಜಹಂಸ ಹಾಗೂ ಇತರ ಬಸ್‌ಗಳು ಶಿಗ್ಗಾಂವಿ ನಿಲ್ದಾಣದ ಒಳಗೆ ಬಂದು ಹೋಗುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಮಹಿಳಾ ಪ್ರಯಾಣಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳಕ್ಕೆ ಬಸ್ ಸೇವೆ ಒದಗಿಸಲು ನಿರ್ಧರಿಸಲಾಗಿದ್ದು ಸಾರ್ವಜನಿಕರ ಪಂಢರಪುರಕ್ಕೂ ಬೇಡಿಕೆಯಂತೆ ವಿಸ್ತರಿಸಲಾಗುವುದು ಎಂದರು.

ಈ ವೇಳೆ ಎಸ್.ಎಫ್. ಮಣಕಟ್ಟಿ ಗುಡ್ಡಪ್ಪ ಜಲದಿ, ಶಂಭು ಆಜೂರ, ಅಣ್ಣಪ್ಪ ಲಮಾಣಿ, ಹಜರತಲಿ ಚೂಡಿಗಾರ, ಮಲ್ಲಮ್ಮ ಸೋಮನಕಟ್ಟಿ, ಮಾಂತೇಶ ಸಾಲಿ, ಗಣಪತಿ ಗಣೋಜಿ, ಶಂಕ್ರಗೌಡ ಪಾಟೀಲ, ಯೂನಿಸ್ ಅಹ್ಮದ್ ಕಲ್ಯಾಣ, ಶಂಕರ ಗಂಗಣ್ಣನವರ, ಬಸವರಾಜ ಹಾದಿಮನಿ, ಕುಬೇರ ಬೆಳವಲಕೊಪ್ಪ ಸಾರಿಗೆ ಇಲಾಖೆಯ ಅಧಿಕಾರಿಗಳಾದ ವಿಜಯಕುಮಾರ, ಡಿಪೋ ಮ್ಯಾನೇಜರ್ ಕೃಷ್ಣಾ ರಾವುತನಕಟ್ಟಿ ಸೇರಿದಂತೆ ಇತರರಿದ್ದರು.