ಪಿಎಸ್ಐ ಆಗಲೇಬೇಕೆಂದು ಹಠ ತೊಟ್ಟಿದ್ದ ಪರಶುರಾಮ 10 ಸರ್ಕಾರಿ ನೌಕರಿ ತ್ಯಜಿಸಿದ್ದರು

| Published : Aug 04 2024, 01:27 AM IST / Updated: Aug 04 2024, 11:33 AM IST

ಪಿಎಸ್ಐ ಆಗಲೇಬೇಕೆಂದು ಹಠ ತೊಟ್ಟಿದ್ದ ಪರಶುರಾಮ 10 ಸರ್ಕಾರಿ ನೌಕರಿ ತ್ಯಜಿಸಿದ್ದರು
Share this Article
  • FB
  • TW
  • Linkdin
  • Email

ಸಾರಾಂಶ

ಪಿಎಸ್ಐ ಆಗಲೇಬೇಕೆಂದು ಹಠ ತೊಟ್ಟಿದ್ದ ಪರಶುರಾಮ ಒಂದಲ್ಲಾ ಎರಡಲ್ಲ ಬರೋಬ್ಬರಿ 10 ಸರ್ಕಾರಿ ನೌಕರಿಗಳನ್ನು ತ್ಯಜಿಸಿದ್ದು, ಹಗಲಿರುಳು ಓದಿ ಪೊಲೀಸ್‌ ಹುದ್ದೆ ಪಡೆದುಕೊಂಡಿದ್ದರು. ಆದರೆ, ವರ್ಗಾವಣೆ ದಂಧೆಯ ಒತ್ತಡದಿಂದಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಕೊಪ್ಪಳ: ಪಿಎಸ್ಐ ಆಗಲೇಬೇಕೆಂದು ಹಠ ತೊಟ್ಟಿದ್ದ ಪರಶುರಾಮ ಒಂದಲ್ಲಾ ಎರಡಲ್ಲ ಬರೋಬ್ಬರಿ 10 ಸರ್ಕಾರಿ ನೌಕರಿಗಳನ್ನು ತ್ಯಜಿಸಿದ್ದು, ಹಗಲಿರುಳು ಓದಿ ಪೊಲೀಸ್‌ ಹುದ್ದೆ ಪಡೆದುಕೊಂಡಿದ್ದರು. ಆದರೆ, ವರ್ಗಾವಣೆ ದಂಧೆಯ ಒತ್ತಡದಿಂದಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿ ಜನಕಮುನಿ ಹಾಗೂ ಗಂಗಮ್ಮ ದಂಪತಿಯ ಐದನೇ ಪುತ್ರ ಪರಶುರಾಮ ಅಪ್ಪಟ ಗ್ರಾಮೀಣ ಪ್ರತಿಭೆ. ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ಅಣ್ಣಂದಿರು ಇದ್ದಾರೆ. ಸೋಮನಾಳ ಗ್ರಾಮದ ಮೊದಲ ಪಿಎಸ್ಐ ಎನ್ನುವ ಹೆಗ್ಗಳಿಕೆ ಪಡೆದಿದ್ದ ಪರಶುರಾಮ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದು, ತಾಲೂಕು ಕೇಂದ್ರದಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಹಾಗೂ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ (ಕಲಾ ವಿಭಾಗ) ಪಡೆದಿದ್ದಾರೆ.

ಪಿಯುಸಿ ಫೇಲಾಗಿ ಬೆಂಗಳೂರಲ್ಲಿ ಕೂಲಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 4 ವಿಷಯಗಳನ್ನು ಫೇಲಾಗಿದ್ದ ಪರಶುರಾಮ ಮನನೊಂದು ಬೆಂಗಳೂರಿಗೆ ಹೋಗಿ ಗಾಲ್ಫ್‌ ಮೈದಾನದಲ್ಲಿ ದಿನಗೂಲಿಗಾಗಿ ನೀರು ಬೀಡುತ್ತಿದ್ದರು. ಪುನಃ ಗ್ರಾಮಕ್ಕೆ ಆಗಮಿಸಿ ಪಿಯುಸಿ ಉತ್ತೀರ್ಣರಾದರು. ಪದವಿ ಓದಲು ಧಾರವಾಡಕ್ಕೆ ಹೋಗಿದ್ದ ಅವರು ಮುಂದೆ ಪ್ರಯತ್ನಿಸಿದ ಎಲ್ಲ ಪರೀಕ್ಷೆಗಳಲ್ಲಿ ಯಶಸ್ಸು ಕಂಡಿದ್ದಾರೆ. ಎಫ್‌ಡಿಎ, ಪಿಡಿಒ, ಪಿಡಿಒ ಗ್ರೇಡ್-2, ಕೆಎಸ್‌ಆರ್‌ಟಿಸಿ ಟ್ರಾಫಿಕ್ ಇನ್‌ಸ್ಪೆಕ್ಟರ್ ಹೀಗೆ ವಿವಿಧ ಸುಮಾರು 10 ನೌಕರಿಗಳಿಗೆ ಆಯ್ಕೆಯಾಗಿದ್ದರು. ಕೇವಲ ಎಫ್‌ಡಿಎ ಮತ್ತು ಜೈಲರ್ ಆಗಿ ಕಾರ್ಯನಿರ್ವಹಿಸಿದ್ದು, ಉಳಿದ ಹುದ್ದೆಗಳನ್ನು ತ್ಯಜಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲರ್ ಆಗಿದ್ದಾಗ 2018ರಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು.

ಯಾದಗಿರಿಯಿಂದ ಕೇವಲ 7 ತಿಂಗಳಿಗೆ ವರ್ಗಾವಣೆಯಾಗಿದ್ದರಿಂದ ತೀವ್ರ ಮನನೊಂದಿದ್ದ ಪರುಶುರಾಮ, ಮರಳಿ ಯಾದಗಿರಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊಡಿಸುವಂತೆ ಹಿತೈಷಿಗಳಲ್ಲಿ ಕೇಳಿಕೊಂಡಿದ್ದರು ಎಂದು ಆಪ್ತ ವಲಯದವರು ತಿಳಿಸಿದ್ದಾರೆ.