ಅವಧಿ ಮೀರಿದ ಔಷಧಕ್ಕೆ 10 ಕುರಿಗಳ ಸಾವು, 90ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ

| Published : Mar 23 2024, 01:03 AM IST

ಅವಧಿ ಮೀರಿದ ಔಷಧಕ್ಕೆ 10 ಕುರಿಗಳ ಸಾವು, 90ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಅವಧಿ ಮೀರಿದ ಔಷಧಿ ಸೇವನೆಯಿಂದ 10 ಕುರಿಗಳು ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕೊಪ್ಪಳ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದಿದೆ.

ಸಿಂಧನೂರು: ಅವಧಿ ಮೀರಿದ ಔಷಧಿ ಸೇವನೆಯಿಂದ 10 ಕುರಿಗಳು ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕೊಪ್ಪಳ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದಿದೆ.

ರತ್ನಾಪುರ ಹಟ್ಟಿಯ ಹನುಮಂತಪ್ಪ ಗೊಲ್ಲರ್ ಎನ್ನುವ 600 ಕುರಿಗಳ ಮಾಲೀಕರು ತಮ್ಮ ಕುರಿಗಳು ಉತ್ತಮವಾಗಿ ಆಹಾರ ಸೇವಿಸಲು ಮತ್ತು ಆರೋಗ್ಯದಿಂದ ಬೆಳವಣಿಗೆ ಹೊಂದಲು ಔಷಧ ನೀಡುವಂತೆ ಸಿಂಧನೂರು ತಾಲೂಕು ಪಶು ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದರು.

ಈ ವೇಳೆ ಕುರಿಗಳ ಮಾಲೀಕ ಹನುಮಂತಪ್ಪ ಅವರಿಂದ 21 ಸಾವಿರ ರು. ಹಣ ಪಡೆದು ಹಿರಿಯ ಅಧೀಕ್ಷಕ ರಾಮ ನಾಯ್ಕ್ ಔಷಧಿ ನೀಡಿದ್ದಾರೆ. ಈ ಔಷಧಿಯನ್ನು ಮಾಲೀಕರು ಕುರಿಗಳಿಗೆ ತಿನ್ನಿಸಿದ ನಂತರ ಗುರುವಾರ ರಾತ್ರಿ 2 ಹಾಗೂ ಶುಕ್ರವಾರ 8 ಸೇರಿ ಒಟ್ಟು 10 ಕುರಿಗಳು ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಔಷಧಿ ಸೇವಿಸಿದ ನಂತರ ಕುರಿಗಳು ಸಾವನ್ನಪ್ಪಿರುವ ಕುರಿತಂತೆ ವಿಚಾರಣೆ ನಡೆಸಲು ಮಾಲೀಕ ಹನುಮಂತಪ್ಪ ಸಿಂಧನೂರು ಪಶು ಆಸ್ಪತ್ರೆಗೆ ಬಂದಾಗ ಅಧೀಕ್ಷಕ ರಾಮ ನಾಯ್ಕ್ ಉಡಾಫೆಯಾಗಿ ವರ್ತಿಸಿದ್ದಾರೆ. ಅಲ್ಲದೆ ಕುರಿಗಳ ಸಾವಿಗೆ 50 ಸಾವಿರ ರು. ಪರಿಹಾರ ನೀಡುತ್ತೇನೆ. ಈ ಕುರಿಗಳನ್ನು ತೆಗೆದುಕೊಂಡು ಹೋಗಿ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ.

ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಔಷಧಿಯನ್ನು ಉಚಿತವಾಗಿ ವಿತರಿಸಲು ಅವಕಾಶವಿದ್ದರೂ ಸಹ 600 ಕುರಿಗಳಿಗೆ ಔಷಧಿ ನೀಡಲು ಹಣವನ್ನು ಕುರಿ ಮಾಲೀಕ ಹನುಮಂತಪ್ಪ ಅವರಿಂದ ಪಡೆದು ಅವಧಿ ಮೀರಿದ ಔಷಧಿ ನೀಡಿರುವುದೇ ಕುರಿಗಳ ಸಾವಿಗೆ ಕಾರಣ. ಒಂದೊಂದು ಕುರಿ 50 ಸಾವಿರ ರು. ಬೆಲೆ ಬಾಳುತ್ತಿದ್ದವು. ಹೀಗಾಗಿ ಕುರಿಗಳ ಸಾವಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.

ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ, ಕರ್ನಾಟಕ ರಕ್ಷಣಾ ಪಡೆ ಜಿಲ್ಲಾ ಘಟಕ ಅಧ್ಯಕ್ಷ ಮೌನೇಶ ದೊರೆ ಹಾಗೂ ಅನೇಕ ರೈತರು ಇದ್ದರು.