ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲದಿಂದಲೇ ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿರುವ ಇತಿಹಾಸವನ್ನು ನಿಖಿಲ್ ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿಯವರೇ ನಾನು ಮುಖ್ಯಮಂತ್ರಿಯಾಗಲು ಚಲುವರಾಯಸ್ವಾಮಿ, ಬಾಲಕೃಷ್ಣ ಮತ್ತು ಇತರೆ ಸ್ನೇಹಿತರೇ ಕಾರಣ ಎಂದು ವಿಧಾನಸಭೆಯಲ್ಲೇ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ೧೦ ಸಾವಿರ ಕೋಟಿ ರು. ಹಣ ಬಿಡುಗಡೆಯಾಗಿರುವುದಕ್ಕೆ ದಾಖಲೆ ಒದಗಿಸಲು ಸಿದ್ಧರಿದ್ದೇವೆ. ಕ್ಷೇತ್ರವಾರು ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಮುಂದಿನವಾರ ಬಿಡುಗಡೆ ಮಾಡುವುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದಲ್ಲಿ ನೀಡಿರುವ ಅನುದಾನದ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸರ್ಕಾರ ಸಚಿವರು, ಶಾಸಕರ ಮೂಲಕ ಸುಮಾರು ೧೦ ಸಾವಿರ ಕೋಟಿ ರು. ಹಣವನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ನೀಡಿರುವುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಕೇವಲ ಪ್ರಚಾರಕ್ಕಾಗಿ ನಾವು ಮಾತನಾಡುವುದಿಲ್ಲ. ಕೆಲವೇ ದಿನಗಳಲ್ಲಿ ನಾವು ದಾಖಲೆಯನ್ನೂ ಬಿಡುಗಡೆ ಮಾಡುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ೨೦೧೮ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಸಚಿವರು, ಏಳು ಶಾಸಕರನ್ನು ಜಿಲ್ಲೆಯ ಜನರು ನೀಡಿದ್ದರು. ಆ ದಿನಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಕೂಡ ಜೆಡಿಎಸ್‌ನವರು ಜನರ ಮುಂದಿಡಬೇಕು. ಪದೇ ಪದೇ ಜಿಲ್ಲೆಗೆ ೮ ಸಾವಿರ ಕೋಟಿ ರು. ಕೊಟ್ಟಿರುವ ಬಗ್ಗೆ ಪ್ರಸ್ತಾಪ ಮಾಡುವುದು ಜಿಲ್ಲೆಯ ಜನರಿಗೆ ದ್ರೋಹ ಬಗೆದಂತಾಗಿದೆ. ೮ ಸಾವಿರ ಕೋಟಿ ರು. ಅನುದಾನ ಬಜೆಟ್, ಕ್ಯಾಬಿನೆಟ್, ಅಧಿವೇಶನದಲ್ಲಿ ಅನುಮೋದನೆಯಾಗಿರುವ ದಾಖಲೆಯನ್ನೂ ಬಿಡುಗಡೆ ಮಾಡುವಂತೆ ಆಗ್ರಹಪಡಿಸಿದರು.

ಚಲುವರಾಯಸ್ವಾಮಿ ಬಗ್ಗೆಯೂ ನಿಖಿಲ್ ಲಘುವಾಗಿ ಮಾತನಾಡಿದ್ದಾರೆ. ೧೯೯೯ರಲ್ಲಿ ಚಲುವರಾಯಸ್ವಾಮಿ ಅವರು ಗೆದ್ದು ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿದ್ದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸಿದ್ದರು. ಜೆಡಿಎಸ್ ನಾಯಕರು ಅವರ ಸಂಘಟನಾ ಶಕ್ತಿಯಿಂದ ಬೆಚ್ಚಿ ಕೊಡಬಾರದ ಕಷ್ಟ-ಕೋಟಲೆಗಳನ್ನೂ ಅವರಿಗೆ ಕೊಟ್ಟರು. ಇದನ್ನು ಸಹಿಸದೆ ಕಾಂಗ್ರೆಸ್‌ಗೆ ಬಂದ ಚಲುವರಾಯಸ್ವಾಮಿ ಅವರು ಪಕ್ಷವನ್ನು ಸಂಘಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲದಿಂದಲೇ ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿರುವ ಇತಿಹಾಸವನ್ನು ನಿಖಿಲ್ ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿಯವರೇ ನಾನು ಮುಖ್ಯಮಂತ್ರಿಯಾಗಲು ಚಲುವರಾಯಸ್ವಾಮಿ, ಬಾಲಕೃಷ್ಣ ಮತ್ತು ಇತರೆ ಸ್ನೇಹಿತರೇ ಕಾರಣ ಎಂದು ವಿಧಾನಸಭೆಯಲ್ಲೇ ಹೇಳಿದ್ದಾರೆ. ಇದೆಲ್ಲವನ್ನೂ ಮರೆತಿರುವ ನಿಖಿಲ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕನಿಷ್ಠ ಒಂದು ಗ್ರಾಮ ಪಂಚಾಯ್ತಿಯನ್ನೂ ಗೆಲ್ಲಲಾಗದ ನಿಖಿಲ್ ಇತಿಹಾಸದ ಪುಟವನ್ನು ತಿರುವಿ ನೋಡುವಂತೆ ಸಲಹೆ ನೀಡಿದರು.

ಮೈಷುಗರ್‌ನಲ್ಲಿ ಲೋಪವಾಗಿಲ್ಲ:

ಮೈಷುಗರ್‌ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾ ತಂಡ ತನಿಖೆ ನಡೆಸಿ ಕಂಪನಿಯಲ್ಲಿ ಯಾವುದೇ ಆರ್ಥಿಕ ಲೋಪವಾಗಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ಯಾವುದೇ ಅವ್ಯವಹಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಬ್ಬಿನ ಬಾಕಿ ೨.೪೮ ಕೋಟಿ ರು. ನೀಡಬೇಕಿದೆ. ವಾರದೊಳಗೆ ಬಾಕಿ ಪಾವತಿ ಮಾಡುವುದಾಗಿ ಭರವಸೆ ನೀಡಿದರು.

ಎಲ್‌ಆರ್‌ಎಸ್ ಹೇಳಿಕೆಗೆ ಕೆಪಿಸಿಸಿಗೆ ಪತ್ರ:

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಹೇಳಿಕೆ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಶಿವರಾಮೇಗೌಡರೇ ಹೇಳಿಕೆ ನೀಡಿರುವಂತೆ ಇದೊಂದು ಎಐ ಆಧಾರಿತ ಆಡಿಯೋ ಆಗಿದ್ದು, ಇದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿರುವುದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡರಾದ ಸಿ.ಎಂ. ದ್ಯಾವಪ್ಪ, ಸಿ.ಆರ್. ರಮೇಶ, ರಾಮಕೃಷ್ಣ, ವಿಜಯಕುಮಾರ್ ಇತರರು ಗೋಷ್ಠಿಯಲ್ಲಿದ್ದರು.