ಸಾರಾಂಶ
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸಿಬಿಎಸ್‌ಸಿ ಸ್ಕೂಲ್ ಚಂದನದಲ್ಲಿ ಡಿ. 10, 11, 12ರಂದು ಬೆಳಗ್ಗೆ 8.30ರಿಂದ ಸಂಜೆ 4ರ ವರೆಗೆ ವಿಶ್ವಮಟ್ಟದ ವಿಜ್ಞಾನಿಗಳಿಂದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ನಡೆಯಲಿದೆ ಎಂದು ಸ್ಕೂಲ್ ಚಂದನದ ಅಧ್ಯಕ್ಷ ಟಿ. ಈಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗದಗ: ಜಿಲ್ಲೆಯ ಲಕ್ಷ್ಮೇಶ್ವರದ ಸಿಬಿಎಸ್‌ಸಿ ಸ್ಕೂಲ್ ಚಂದನದಲ್ಲಿ ಡಿ. 10, 11, 12ರಂದು ಬೆಳಗ್ಗೆ 8.30ರಿಂದ ಸಂಜೆ 4ರ ವರೆಗೆ ವಿಶ್ವಮಟ್ಟದ ವಿಜ್ಞಾನಿಗಳಿಂದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ನಡೆಯಲಿದೆ ಎಂದು ಸ್ಕೂಲ್ ಚಂದನದ ಅಧ್ಯಕ್ಷ ಟಿ. ಈಶ್ವರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಭಾರತ ರತ್ನ ಪ್ರೊ. ಸಿಎನ್ಆರ್ ರಾವ್ ಅವರ ಎಜುಕೇಶನ್ ಫೌಂಡೇಶನ್ ಹಾಗೂ ಸ್ಕೂಲ್ ಚಂದನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ಭಾರತರತ್ನ ಸಿಎನ್ಆರ್ ರಾವ್ ಮತ್ತು ಡಾ. ಇಂದುಮತಿ ರಾವ್ ಅವರು ಆಶಯ ನುಡಿಗಳನ್ನು ಹೇಳಲಿದ್ದಾರೆ. ಜವಾಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರದ ಅಧ್ಯಕ್ಷ, ಹಿರಿಯ ವಿಜ್ಞಾನಿ ಪ್ರೊ. ಜಿ.ಯು. ಕುಲಕರ್ಣಿ ಉದ್ಘಾಟಿಸುವರು. ಹಿರಿಯ ವಿಜ್ಞಾನಿ ಪ್ರೊ. ಎಸ್.ಎಂ. ಶಿವಪ್ರಸಾದ್ ವಿಶೇಷ ಉಪನ್ಯಾಸ ನೀಡುವರು.ವಿಶ್ವದ ಬೇರೆ ಬೇರೆ ದೇಶಗಳಿಂದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಈ ಮೂರು ದಿನದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ವಿಜ್ಞಾನಿಗಳಾದ ಜಾನಪಿ ಹಾಗೂ ಕ್ಲೆಡಿಯಾ ಅಮೆರಿಕ ಸಂಯುಕ್ತ ಸಂಸ್ಥಾನದ ಲಾಸ್ ಎಂಜಲೀಸ್ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಟೀಮ್ ಫಿಶರ್ ಹಾಗೂ ಯುಎಸ್ಎದ ನೋಟ್ರೆ ಡೇಮ್ ವಿಶ್ವವಿದ್ಯಾಲಯದ ಜಾನ್ ಎ. ಜಿಮ್, ಯುಕೆ ಮ್ಯಾನ್‌ಚೆಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೇರಿದಂತೆ 15ಕ್ಕೂ ಹೆಚ್ಚಿನ ವಿದೇಶಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಅಕಾಡೆಮಿಯ ಹಿಂದಿನ ನಿರ್ದೇಶಕ ಪ್ರೊಫೆಸರ್ ಎಸ್.ಎಂ. ಶಿವಪ್ರಸಾದ್ ಜವಾಹರಲಾಲ್ ಉನ್ನತ ಸಂಶೋಧನಾ ಕೇಂದ್ರದ ಈಶ್ವರ ಮೂರ್ತಿ, ಪ್ರೊ. ವಿದ್ಯಾಧೀರ ಧೀರಜ್, ಡಾ. ಜಯಶ್ರೀ ಭಟ್, ಅರುಣ್ ಹಾಗೂ ಸಂಯೋಜಕ ಜಯಚಂದ್ರ ವಿನಾಯಕ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಈಗ 90ನೇ ವಯಸ್ಸಿಗೆ ಕಾಲಿಡುತ್ತಿರುವ ಪ್ರೊ. ರಾವ್ ಅವರಿಗೆ ಚಂದನ ಚಿಣ್ಣರು ಚಂದನ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ರಾಜ್ಯದ ಬೇರೆ ಬೇರೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರಿಗೆ ಪಾಲ್ಗೊಳ್ಳಲು ಅವಕಾಶವಿದೆ. ಕೊನೆ ದಿನ ಭಾರತ ರತ್ನ ರಾವ್ ಎಜುಕೇಶನ್ ಫೌಂಡೇಶನ್‌ನಿಂದು ಪ್ರಮಾಣಪತ್ರ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಆಸಕ್ತರು ಡಿ. 9ರ ಒಳಗಾಗಿ ಫೋನ್ ನಂಬರ್, ಇ-ಮೇಲ್ ಮುಖಾಂತರ ಅಥವಾ ಖುದ್ದಾಗಿ ಹೆಸರು ನೋಂದಾಯಿಸಬಹುದು ಎಂದು ಈಶ್ವರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸ್ಕೂಲ್ ಚಂದನದ ಪ್ರಾಚಾರ್ಯ ರಾಮ ಭಾವನವರ, ಪುರಸಭೆಯ ಸದಸ್ಯ ವಿಜಯ ಕರಡಿ ಹಾಜರಿದ್ದರು.
;Resize=(128,128))
;Resize=(128,128))