ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟು ಬಳಿ ಪರೀಕ್ಷಾರ್ಥ ಸ್ಫೋಟ ನಡೆಸಿ ೧೦ ವಾರದೊಳಗೆ ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಸಭೆಯ ಗಮನಕ್ಕೆ ತಂದರು.೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವ ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ೧೭ ಮಂದಿ ಕ್ರಷರ್ ಮಾಲೀಕರು ೨೦೨೧ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೧೨.೧.೨೦೨೨ರಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವೈಜ್ಞಾನಿಕ ವರದಿ ಪಡೆದು, ಟ್ರಯಲ್ ಬ್ಲಾಸ್ಟ್ ನಡೆಸಿ ನಂತರ ಅನುಮತಿ ನೀಡುವಂತೆ ತಿಳಿಸಿತ್ತು.
ಅಣೆಕಟ್ಟು ಸುರಕ್ಷತಾ ಸಮಿತಿ ವರದಿ ಆಧರಿಸಿ ಕಾವೇರಿ ನೀರಾವರಿ ನಿಗಮದವರು ಜಾರ್ಖಂಡ್‌ನ ಧನಾಬಾದ್‌ನಲ್ಲಿರುವ ಸಿಐಎಂಎಫ್‌ಆರ್ ತಂಡವನ್ನು ಕರೆಸಿ ೨೫.೫.೨೦೨೨ರಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಮುಂದಾದಾಗ ರೈತರಿಂದ ವಿರೋಧ ವ್ಯಕ್ತವಾಗಿತ್ತು.ಮತ್ತೆ ಕೆಆರ್‌ಎಸ್ ಬಳಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಡೆಸಿ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಸಮಿತಿ ನಿರ್ಧಾರ ಕೈಗೊಂಡು ೨೫ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಜಾರಿಗೊಳಿಸಿತು.
ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಗಣಿ ಮಾಲೀಕರು ಹೋದಾಗ ೮.೧.೨೦೨೪ರಲ್ಲಿ ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿತು. ಅದರ ಮರುದಿನವೇ ೯.೧.೨೦೨೪ರಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದಾಗ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮದವರು ೧೮ ರಿಂದ ೨೦ ಲಕ್ಷ ರು. ಖರ್ಚು ಮಾಡಿ ವಿಜ್ಞಾನಿಗಳ ತಂಡವನ್ನು ಕರೆಸಿದ್ದರು. ಆದರೆ, ಟ್ರಯಲ್ ಬ್ಲಾಸ್ಟ್‌ಗೆ ವಿರೋಧ ಎದುರಾಗಿದ್ದರಿಂದ ನಡೆಯಲಿಲ್ಲ. ಇದೀಗ ಹೈಕೋರ್ಟ್ ೧೦ ವಾರಗಳೊಳಗೆ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿ ಮಂಗಳವಾರ (ಮಾ.೬) ಆದೇಶಿಸಿರುವುದನ್ನು ಸಭೆಯ ಗಮನಕ್ಕೆ ತಂದರು.ಸುಗ್ರೀವಾಜ್ಞೆ ತರುವ ಅಧಿಕಾರ ಸರ್ಕಾರಕ್ಕಿದೆ: ಪ್ರಸನ್ನ ಎನ್.ಗೌಡ
ಮಂಡ್ಯ:ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಅಣೆಕಟ್ಟು ಸುರಕ್ಷತಾ ಕಾಯಿದೆ ವ್ಯಾಪ್ತಿಗೊಳಪಡಿಸಿ ಸುಗ್ರೀವಾಜ್ಞೆ ತರುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆ ಮೂಲಕ ಟ್ರಯಲ್ ಬ್ಲಾಸ್ ಅನ್ನು ಶಾಶ್ವತವಾಗಿ ತಡೆಯಬಹುದು ಎಂದು ರೈತ ಮುಖಂಡ ಪ್ರಸನ್ನ ಎನ್.ಗೌಡ ಸಚಿವರಿಗೆ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಣೆಕಟ್ಟು ಸುರಕ್ಷತಾ ಕಾಯಿದೆಯನ್ನು ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ. ಕೆಆರ್‌ಎಸ್ ಗ್ರಾವಿಟಿ ರೆನ್‌ನಲ್ಲಿರುವುದರಿಂದ ಸರ್ಕಾರಕ್ಕೆ ನಿಯಮಾವಳಿ ರೂಪಿಸುವ, ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವಿದೆ. ಗಣಿಗಾರಿಕೆಯಿಂದ ಅಪಾಯವಿರುವ ಬಗ್ಗೆ ವೈಜ್ಞಾನಿಕ ವರದಿಗಳನ್ನಿಟ್ಟುಕೊಂಡು ಕಾನೂನು ರೂಪಿಸುವುದಕ್ಕೆ ಸರ್ಕಾರಕ್ಕೆ ಅವಕಾಶಗಳಿವೆ. ಅದಕ್ಕಾಗಿ ಬೇರೊಬ್ಬರ ಬಳಿ ಹೋಗುವ ಅಗತ್ಯವೇ ಇಲ್ಲ. ಕೆಆರ್‌ಎಸ್ ನಮ್ಮೆಲ್ಲರ ಬದುಕಿನ ಪ್ರಶ್ನೆ. ಸರ್ಕಾರಕ್ಕೆ ಕೆಆರ್‌ಎಸ್ ಸಂರಕ್ಷಣೆ, ರೈತರ ರಕ್ಷಣೆ ಮುಖ್ಯವಾಗಿದ್ದರೆ ಸುಗ್ರೀವಾಜ್ಞೆ ತಂದು ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.