ಸಾರಾಂಶ
ಬೆಳಗಾವಿ ನಗರದಲ್ಲಿ ಈಗಿರುವ ಇಎಸ್‌ಐ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಇದನ್ನು 152 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದು ಅನುಮೋದನೆಯೂ ಸಿಕ್ಕಿದೆ. ಮುಂಬರುವ ದಿನಗಳಲ್ಲಿ 100 ಹಾಸಿಗಳ ಭವ್ಯ ಕಟ್ಟಡ ತಲೆ ಎತ್ತಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಈಗಿರುವ ಇಎಸ್‌ಐ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಇದನ್ನು 152 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದು ಅನುಮೋದನೆಯೂ ಸಿಕ್ಕಿದೆ. ಮುಂಬರುವ ದಿನಗಳಲ್ಲಿ 100 ಹಾಸಿಗಳ ಭವ್ಯ ಕಟ್ಟಡ ತಲೆ ಎತ್ತಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಭಾನುವಾರ ಇಲ್ಲಿನ ಅಶೋಕ ನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈಗಿರುವ ಕಟ್ಟಡ ನಿರ್ಮಿಸಿ 25 ವರ್ಷಗಳಾಗಿವೆ. ಕಟ್ಟಡ ಶಿಥಿಲಗೊಂಡಿದೆ. ಈಗಿರುವ ಆಸ್ಪತ್ರೆ 50 ಬೆಡ್‌ಗಳನ್ನು ಹೊಂದಿದೆ. ಇಎಸ್‌ಐ ಸೌಲಭ್ಯ ಹೊಂದಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಹೊಸ ಕಟ್ಟಡ 100 ಬೆಡ್‌ಗಳ ವ್ಯವಸ್ಥೆ ಹೊಂದಿರಲಿದೆ ಎಂದು ಹೇಳಿದರು.ಇಲ್ಲಿ ಮೂರು ಕಾಲು ಎಕರೆ ಜಾಗ ಲಭ್ಯವಿದೆ. ಆದರೆ, ಇದು ಕೈಗಾರಿಕಾ ಪ್ರದೇಶದಿಂದ ಬಹಳ ದೂರ ಇರುವುದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ಜಾಗ ಕೊಡುತ್ತೇವೆ. ಅಲ್ಲಿಯೇ ಹೊಸ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ವಿಚಾರ ಮಾಡುವಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮನವಿ ಮಾಡಿದ್ದಾರೆ. ದೆಹಲಿಗೆ ಹೋದ ಬಳಿಕ ಈ ಕುರಿತು ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವೆ ಭರವಸೆ ನೀಡಿದರು.
ಸದ್ಯ ಈ ಆಸ್ಪತ್ರೆಯಲ್ಲಿ ಡೇಕೇರ್ ಸೆಂಟರ್ ಅಂದರೆ ಹಗಲು ಬಂದ ರೋಗಿಗಳನ್ನು ತಪಾಸಣೆ ಮಾಡಿ ಬೇರೆ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ. ಇಎಸ್ಐ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಹೃದಯ ಸಂಬಂಧಿತ ಕಾಯಿಲೆ, ಕಿಡ್ನಿ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಇದ್ದವರು ಸಹಜವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಹೀಗಾಗಿ ಇಎಸ್‌ಐ ಕಾರ್ಡ್ ಗಳನ್ನು ಆಯುಷ್ಮಾನ್ ಭಾರತ ಸೇವೆಯೊಂದಿಗೆ ಸಂಯೋಜನೆ ಮಾಡಿ ಆಯುಷ್ಮಾನ್ ಸೇವೆ ಒದಗಿಸುವ ಎಲ್ಲ ಆಸ್ಪತ್ರೆಗಳಲ್ಲೂ ನೇರವಾಗಿ ಯಾವುದೇ ಶುಲ್ಕವಿಲ್ಲದೆ ಆರೋಗ್ಯ ಸೇವೆ ಲಭಿಸಲಿದೆ ಎಂದ ಅವರು, ಬೆಳಗಾವಿ ಜಿಲ್ಲೆಯ ಕಾರ್ಮಿಕರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸಿಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಮಠಮಾನ್ಯಗಳಿಗೆ ವಹಿಸಲು ಚಿಂತನೆ:
ಬಡವರಿಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಹೊಸ ಚಿಂತನೆಗಳನ್ನು ಮಾಡುತ್ತಿದೆ. ಈಗಾಗಲೇ ಕೆಲವು ಮಠಮಾನ್ಯಗಳು ಆಸ್ಪತ್ರೆಗಳನ್ನು ತೆರೆದು ಬಡರೋಗಿಗಳಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿವೆ. ಚಿತ್ರದುರ್ಗದ ಶ್ರೀ ಸತ್ಯಸಾಯಿ ಆಸ್ಪತ್ರೆ ಬಡವರಿಗೆ ಉಚಿತವಾಗಿ ತಜ್ಞ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ಮುಂಬರುವ ದಿನಗಳಲ್ಲಿ ಇಂತಹ ಉಚಿತ ಚಿಕಿತ್ಸೆ ಕೊಡಲು ಮುಂದೆ ಬರುವ ಮಠಗಳಿಗೆ ಇಎಸ್‌ಐ ಆಸ್ಪತ್ರೆಗಳ ಜವಾಬ್ದಾರಿ ನೀಡುವ ಚಿಂತನೆಯೂ ನಡೆದಿದೆ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಅನಿಲ ಬೆನಕೆ ಮತ್ತಿತರರು ಉಪಸ್ಥಿತರಿದ್ದರು.