ಕುಮಾರೇಶ್ವರ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕ ಹೊಂದಿದ್ದು, ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಪ್ರಾ ಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕುಮಾರೇಶ್ವರ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕ ಹೊಂದಿದ್ದು, ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಪ್ರಾ ಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.ನಗರದ ಶ್ರೀ ಬ.ವಿ.ವ ಸಂಘದ ಸಜ್ಜಲ ಶ್ರೀ ನರ್ಸಿಂಗ್ ಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ವತಿಯಿಂದ ಸೋಮವಾರ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಓಪಿಡಿ ಸಭಾಂಗಣದಲ್ಲಿ ವಿಶ್ವ ಥಲಸ್ಸೆಮಿಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಅಂದಾಜು ಸರಾಸರಿ 3-4 ಪ್ರತಿಶತ ಬಿ. ಥಲಸ್ಸೆಮಿಯಾ ವಾಹಕಗಳ ಹರಡುವಿಕೆ ಇದೆ. ಹಾನಗಲ್ ಕುಮಾರೇಶ್ವರ ಆಸ್ಪತ್ರೆಯೂ ಕೂಡ 100 ಹಾಸಿಗೆಗಳ ಥಲಸ್ಸೆಮಿಯಾ ಘಟಕವನ್ನು ಹೊಂದಿದ್ದು, ಈ ವಿಭಾಗಕ್ಕೆ ಚಿಕಿತ್ಸೆಗೆ ಎಲ್ಲ ಮಕ್ಕಳಿಗೆ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ವಿಭಾಗದ ಸೇವೆಗಾಗಿ 2022ರಲ್ಲಿ ಆಸ್ಪತೆಗೆ ಹಾಗೂ ವಿಭಾಗದ ಮುಖ್ಯಸ್ಥರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಶ್ಲಾಘನೀಯವಾಗಿದೆ ಎಂದರು. ಅನುವಂಶಿಕತೆಯಿಂದ ಬರುವ ರಕ್ತದ ಅಸ್ವಸ್ಥತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಥಲಸ್ಸೆಮಿಯಾ ದಿನವನ್ನು ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಈ ಖಾಯಿಲೆಯಿಂದ ಬಳಲುತ್ತಿದ್ದು, ಅವರ ಬದುಕಿಗೆ ಬೆಂಬಲವಾಗಿ ನಿಂತು, ನೈತಿಕ ಸ್ಥೈರ್ಯ ತುಂಬುವ ಕೆಲಸದ ಜೊತೆಗೆ ಸೂಕ್ತ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.ಬ.ವಿ.ವ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ದೀಲಿಪ್ ನಾಟೇಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಶುಶ್ರೂಷಕರು ಹಾಗೂ ಆರೋಗ್ಯ ಶುಶ್ರೂಷಾ ಬೋಧಕ ಸಿಬ್ಬಂದಿ ಸಮುದಾಯಕ್ಕೆ ಭೇಟಿ ನೀಡಿ, ಥಲಸ್ಸೆಮಿಯಾ ರೋಗವನ್ನು ತಡೆಗಟ್ಟುವಿಕೆ, ಗುಣಪಡಿಸುವ ವಿಧಾನಗಳು ಮತ್ತು ಥಲಸ್ಸೆಮಿಯಾ ರೋಗಿಗಳ ಆರೈಕೆಯ ಬಗ್ಗೆ ಹಾಗೂ ಥಲಸ್ಸೆಮಿಯಾ ಬಾಧಿತ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆಂದು ಎಲ್ಲ ಶುಶ್ರೂಷಾ ಬೋಧಕ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಎಚ್.ಎಸ್.ಕೆ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಥಲಸ್ಸೆಮಿಯಾ ದಿನದ ಶಿರ್ಷಿಕೆಯ ಕುರಿತು ಮಾತನಾಡಿ, ಥಲಸ್ಸೇಮಿಯಾ ರೋಗದ ಹೊಸ ಚಿಕಿತ್ಸಾ ವಿಧಾನಗಳು ಮತ್ತು ರೋಗ ನಿಯಂತ್ರಿಸುವ ಕುರಿತು ಅನೇಕ ಸಂಶೋಧನೆಗಳನ್ನು ನಡೆಸುವುದು ಅತ್ಯವಶ್ಯಕವಾಗಿದೆ ಎಂದು ವಿವರಿಸಿದರು. ಮಹಾವಿದ್ಯಾಲಯದ ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ.ದಾನೇಶ್ವರಿ ಹಿರೇಮಠ, ಚಿಕ್ಕಮಕ್ಕಳ ಶುಶ್ರೂಷಾ ವಿಭಾಗದ ಪ್ರಾಧ್ಯಾಪಕ ಡಾ. ನಿಂಗನಗೌಡ ಜಿ. ಪಾಟೀಲ, ಡಾ.ಪ್ರಶಾಂತ ಕುಲಕರ್ಣಿ, ಸಂತೋಷ ಸಜ್ಜನ, ಸಹಪ್ರಾಧ್ಯಾಪಕರು, ಕುಮಾರಿ. ಚಂದ್ರಾ ಜತ್, ಕುಮಾರಿ. ರೇಣುಕಾ ಜಾಲಿಹಾಳ, ರಾಜಶೇಖರ ಕಾಬನೂರ, ಶಿವಾನಂದ ಡಿ. ಮಹಾಂತೇಶಗೌಡ ಹಾಗೂ ಪುಷ್ಪಾ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 5ನೇ ಸೆಮೆಸ್ಟರ್ ಹಾಗೂ ಪಿ.ಬಿ.ಬಿಎಸ್ಸಿ ವಿದ್ಯಾರ್ಥಿಗಳಿಂದ ಮೂಕಾಭಿನಯ ಹಾಗೂ ಕಿರುನಾಟಕದ ಪ್ರದರ್ಶನದ ಮೂಲಕ ಜನರಲ್ಲಿ ಥಲಸ್ಸೆಮಿಯಾ ರೋಗದ ಕುರಿತು ಅರಿವು ಮೂಡಿಸಲಾಯಿತು. ಸ್ನಾತಕೋತ್ತರ ಮೊದಲನೇ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.