ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ 100 ಕೋಟಿ

| Published : Feb 08 2024, 01:32 AM IST

ಸಾರಾಂಶ

ಹೆಚ್ಚಿದ ವಾಹನ ಸಂಚಾರದ ಒತ್ತಡದ ಪರಿಣಾಮ ನಗರದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆಯೂ ಏರುತ್ತಿದೆ. ಈ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಉಸ್ತುವಾರಿ ಸಚಿವರು ಸರ್ಕಾರದೊಂದಿಗೆ ಮಾತನಾಡಿ, ಇದೀಗ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ೧೦೦ ಕೋಟಿ ರು.ಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ.

೪೫ ದಿನಗಳಲ್ಲಿ ಡಿಪಿಆರ್ ಮುಗಿಸಲು ಸಿದ್ದತೆ । ಸುದ್ದಿಗಾರರೊಂದಿಗೆ ಡೀಸಿ ಅಕ್ರಂಪಾಷ ಮಾತು

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ನಗರದಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರದ ಒತ್ತಡವನ್ನು ಕಡಿಮೆಗೊಳಿಸಲು ಹೊರವರ್ತುಲ ರಸ್ತೆ ನಿರ್ಮಿಸಲು ಸರ್ಕಾರ ೧೦೦ ಕೋಟಿ ನೀಡಲು ಮುಂದಾಗಿದ್ದು, ೪೫ ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಜಂಟಿ ನೇತೃತ್ವದಲ್ಲಿ ಸರ್ವೇ ಕಾರ್ಯ ಮುಗಿಸಿ ಡಿಪಿಆರ್ ವರದಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲಾ ಕೇಂದ್ರ ಬೆಂಗಳೂರಿಗೆ ಅತಿ ಸಮೀಪವಿದ್ದು, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ, ಸಂಚಾರದ ಒತ್ತಡದಿಂದ ಜನರಿಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪಲು ತೊಂದರೆಯಾಗುತ್ತಿದೆ. ಹೆಚ್ಚಿದ ವಾಹನ ಸಂಚಾರದ ಒತ್ತಡದ ಪರಿಣಾಮ ನಗರದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆಯೂ ಏರುತ್ತಿದೆ. ಈ ವಿಷಯವನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಉಸ್ತುವಾರಿ ಸಚಿವರು ಸರ್ಕಾರದೊಂದಿಗೆ ಮಾತನಾಡಿ, ಇದೀಗ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ೧೦೦ ಕೋಟಿ ರು.ಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ವರ್ತುಲ ರಸ್ತೆ ನಿರ್ಮಾಣದಿಂದ ನಗರದಲ್ಲಿ ವಾಹನ ಸಂಚಾರ ಸುಗಮಗೊಳ್ಳುತ್ತದೆ. ಅಲ್ಲದೆ, ಹಲವು ಕುಟುಂಬಗಳು ನಗರದ ಹೊರ ಭಾಗದಲ್ಲಿ ವಾಸದ ಮನೆಗಳನ್ನು ನಿರ್ಮಿಸಿಕೊಳ್ಳುವುದರಿಂದ ಕೋಲಾರ ನಗರ ಅಭಿವೃದ್ದಿಯೆಡೆಗೆ ಸಾಗಲಿದೆ ಎಂದು ಹೇಳಿದರು.

ಮತ್ತೊಂದು ಯೋಜನೆಯಾದ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿಯಿ೦ದ ಬಂಗಾರಪೇಟೆ ಮೇಲ್ಸೇತುವೆ ಜಿಗ್ ಜಾಗ್ ವರೆಗೂ ಟೆಂಡರ್ ಶೋರ್ ಮಾದರಿಯ ರಸ್ತೆಯನ್ನು ನಿರ್ಮಿಸಲು ಈಗಾಗಲೇ ಡಿಪಿಆರ್ ಸಲ್ಲಿಸಲಾಗಿದೆ. ಈ ರಸ್ತೆಯಲ್ಲಿ ಎರಡೂ ಬದಿ ಪಾದಚಾರಿ ಪುಟ್‌ಪಾತ್, ರಸ್ತೆಯಲ್ಲಿ ಸಿಗುವ ವೃತ್ತಗಳ ಸುತ್ತಲೂ ಹಸಿರು ಉದ್ಯಾನಗಳು ಸೇರಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಶೇ.೫೦ರಷ್ಟು ಸಿಬ್ಬಂದಿ ಕೊರತೆಯಿದೆ:

ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳನ್ನೂ ಒಳಗೊಂಡoತೆ ಶೇ.೫೦ರಷ್ಟು ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಮತ್ತೊಂದೆಡೆ ಕಾಲೇಜು ಶಿಕ್ಷಣ ಇಲಾಖೆಯಲ್ಲೂ ಉಪನ್ಯಾಸಕರ ಕೊರತೆ ಇದ್ದು, ಸಂಬoಧಪಟ್ಟ ಆಯುಕ್ತರ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರವೇ ಕಾಯಂ ಉಪನ್ಯಾಸಕರನ್ನು ನೇಮಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸಕಾಲ ಸೇವೆಯಲ್ಲಿ ಕೋಲಾರಕ್ಕೆ ೪ನೇ ಸ್ಥಾನ:

ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಸಿಬ್ಬಂದಿಯ ಕೊರತೆಯ ನಡುವೆಯೂ ಸಕಾಲ ಸೇವೆಯಲ್ಲಿ ೨೬ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಕಳೆದ ಆರು ತಿಂಗಳಲ್ಲಿ ಎಲ್ಲಾ ಅರ್ಜಿಗಳ ಕೆಲಸಗಳನ್ನು ಪೂರ್ಣಗೊಳಿಸಿ ರಾಜ್ಯದಲ್ಲೇ ೪ನೇ ಸ್ಥಾನಕ್ಕೇರಿದೆ. ಇದು ದಾಖಲೆಯಾಗಿದೆ. ಇದೇ ರೀತಿ ವಕ್ಕಲೇರಿ ನಾಡ ಕಚೇರಿ ಸಹ ಭೂಮಿಗೆ ಸಂಬಂಧಪಟ್ಟ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಮೂಲಕ ರಾಜ್ಯದಲ್ಲಿ ೩ನೇ ಸ್ಥಾನ ಪಡೆದಿದೆ ಎಂದರು.

ಇ-ಆಸ್ತಿ ಅಭಿಯಾನಕ್ಕೆ ಚಾಲನೆ:

ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಲವು ದೂರುಗಳು ಬಂದಿದ್ದ ಹಿನ್ನೆಲೆ ಆಯುಕ್ತರು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿ, ಒಂದು ತಿಂಗಳ ಕಾಲ ಇ-ಖಾತಾ ಆಂದೋಲನ ನಡೆಸಲಾಗುತ್ತಿದೆ. (ಇ- ಆಸ್ತಿ) ಫೆ.೧೨ ರಿಂದ ಮಾ.೧೨ ರವರೆಗೆ ನಡೆಯಲಿದೆ. ಇದೇ ವೇಳೆ ತೆರಿಗೆ ಪಾವತಿ ಬಗ್ಗೆ ಅರಿವು ಮೂಡಿಸಲಾಗುವುದು. ಶೀಘ್ರದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

-----------

ಬಾಕ್ಸ್......

ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ

ಚುನಾವಣೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ೧೬ ನೋಡಲ್ ಆಫೀಸರ್, ಸೆಕ್ಟರ್ ಆಫೀಸರ್, ಎಫ್.ಎಸ್.ಟಿ. ಎಸ್.ಎಸ್.ಟಿ, ವಿಂಗ್, ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನು ಮಾಡಲಾಗಿದೆ. ಆರೋಗ್ಯಕರ ಮತದಾರರ ಪಟ್ಟಿಯನ್ನು ತಯಾರಿ ಮಾಡಲಾಗಿದೆ. ಮತದಾನದಿಂದ ವಂಚಿತರಾಗಿದ್ದವರನ್ನು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಆರ್ಜಿ ಸಲ್ಲಿಸಿದ ಯುವ ಮತದಾರರ ಪಟ್ಟಿಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ ೧೦೨೨ ಮಹಿಳಾ ಮತದಾರರಿದ್ದು, ಇದು ಲಿಂಗಾನುಪಾತ ಸಮತೋಲಿತ ಪಟ್ಟಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು ೪೦ ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.