ಪಡಿತರ ಚೀಟಿ ಮೇಲೆ ದೇಶದ 100 ಕೋಟಿ ಜನರ ಅವಲಂಬನೆ

| Published : Nov 28 2024, 12:32 AM IST

ಸಾರಾಂಶ

ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ.

ಹೊಸಪೇಟೆ: ದೇಶದ 100 ಕೋಟಿ ಜನರು ಈಗಲೂ ಪಡಿತರ ಚೀಟಿ ಮೇಲೆ ಬದುಕುವ ಸ್ಥಿತಿ ಇದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಮಂಗಳವಾರ ನಡೆದ ಸಿಪಿಐಎಂ ಪಕ್ಷದ 13ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಕಲ್ಯಾಣ ಯೋಜನೆಗಳನ್ನು ಕೈಬಿಟ್ಟು ಇದರ ಹೊಣೆಗಾರಿಕೆಯನ್ನು ಶ್ರೀಮಂತ ಕಾರ್ಪೊರೇಟ್‌ ಸಂಸ್ಥೆಗಳಿಗೆ ವಹಿಸುತ್ತಿವೆ. ಹಸಿವಿನಿಂದ ಬಳಲುವರ ಸೂಚ್ಯಂಕದಲ್ಲಿ ಭಾರತ 115ನೇ ಸ್ಥಾನದಲ್ಲಿದೆ. ದೇಶದ ಸ್ಥಿತಿ ಇನ್ನು ಸುಧಾರಿಸಿಲ್ಲ. ದೇಶದಲ್ಲಿ ಅಪೌಷ್ಟಿಕತೆ ಜಾಸ್ತಿ ಇದೆ. ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿವೆ. ಆದರೂ ದೇಶದ ಜನರ ಸಮಸ್ಯೆ ಹಾಗೇ ಉಳಿದಿವೆ. ದೇವದಾಸಿ ಸಮಸ್ಯೆ ಹೋಗಲಾಡಿಸಲು ಆಗಿಲ್ಲ. ದೇವದಾಸಿಯರಿಗೆ ಐದು ಎಕರೆ ನೀರಾವರಿ, ಮಾಸಿಕ ಐದು ಸಾವಿರ ರುಪಾಯಿ ಪೆನ್ಷನ್ ನೀಡಬೇಕು. ದೇವದಾಸಿ ಪದ್ಧತಿ ನಿಯಂತ್ರಣಕ್ಕಾಗಿ ಕಾಯ್ದೆ ತಿದ್ದುಪಡಿ ಮಾಡಬೇಕು. ದೇವದಾಸಿಯರ ಉದ್ಧಾರ ನಮ್ಮ ಕೆಲಸವಲ್ಲ, ಸಿರಿವಂತರ ಕೆಲಸ ಎಂದು ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಮಸಣ ಕಾರ್ಮಿಕರಿಗೂ ತಲಾ ಐದು ಎಕರೆ ಜಮೀನು ನೀಡಬೇಕು. ಜನರ ಆದಾಯ ಜಾಸ್ತಿ ಆಗಬೇಕು. ನರೇಗಾದಲ್ಲಿ ೨೦೦ ದಿನ ಕೂಲಿ ಒದಗಿಸಬೇಕು. ಕೂಲಿ ಹೆಚ್ಚಳ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಂದಾಲ್‌ ಕಂಪನಿಗೆ 3365 ಎಕರೆ ಜಮೀನು ತಲಾ ₹1.25 ಲಕ್ಷಕ್ಕೆ ಒದಗಿಸಿದ್ದಾರೆ. ಇದೇ ಜಮೀನು ಕೃಷಿಕರಿಗೆ ನೀಡುತ್ತಾರಾ? ಬಡವರಿಗೆ ಜಮೀನು ನೀಡುತ್ತಿಲ್ಲ. ಸರ್ಕಾರದ ಬಳಿ

65 ಲಕ್ಷ ಎಕರೆ ಸರ್ಕಾರಿ ಜಾಗ ಇದೆ. ಆದರೆ ಬಡವರಿಗೆ ನೀಡುತ್ತಿಲ್ಲ. ಬೀದರ್‌ನ ರಾಜಕಾರಣಿಯೊಬ್ಬರಿಗೆ 7000 ಎಕರೆ ನೈಸ್ ರಸ್ತೆ ಬಳಿ ಜಮೀನು ನೀಡಲಾಗಿದೆ. ಬಡವರ ಪರ ಇರುವವರನ್ನು ಆಯ್ಕೆ ಮಾಡಬೇಕು ಎಂದರು.

ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಸ್‌.ವೈ. ಗುರುಶಾಂತ, ಆರ್‌.ಎಸ್. ಬಸವರಾಜ, ಬಿ. ಮಾಳಮ್ಮ, ಮರಡಿ ಜಂಬಯ್ಯ ನಾಯಕ, ಕೆ. ನಾಗರತ್ನಮ್ಮ, ಟಿ.ವಿ. ರೇಣುಕಮ್ಮ, ಸಿ. ವಿರುಪಾಕ್ಷಪ್ಪ, ಎ. ಕರುಣಾನಿಧಿ, ಎಸ್‌. ಜಗನ್ನಾಥ, ವಿ. ಸ್ವಾಮಿ, ಎನ್‌. ಯಲ್ಲಾಲಿಂಗ ಮತ್ತಿತರರಿದ್ದರು.

ಹೊಸಪೇಟೆಯಲ್ಲಿ ಮಂಗಳವಾರ ನಡೆದ ನಡೆದ ಸಿಪಿಐಎಂ ಪಕ್ಷದ 13ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು.