ಶಾಸಕರನ್ನು ಖರೀದಿಸಲು 100 ಕೋಟಿ ರು. ಆಫರ್: ಶಾಸಕ ಪಿ.ರವಿಕುಮಾರ್ ವಿರುದ್ಧ ಬಿಜೆಪಿ ದೂರು

| Published : Aug 27 2024, 01:31 AM IST

ಸಾರಾಂಶ

ಆಪರೇಷನ್ ಕಮಲ ಮಾಡುವ ಮೂಲಕ ನಾವು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗುವುದಿಲ್ಲ. ಬದಲಿಗೆ ಅವರವರ ಕಚ್ಚಾಟದಲ್ಲೇ ಸರ್ಕಾರ ಬಿದ್ದು ಹೋಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೂಡಲೇ ಸರ್ಕಾರವೇ ಬಿದ್ದುಹೋಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ಪಕ್ಷ, ಕೇಂದ್ರ ಮತ್ತು ರಾಜ್ಯ ನಾಯಕರು ಕಾಂಗ್ರೆಸ್ ಶಾಸಕರನ್ನು ಖರೀದಿಸಲು 100 ಕೋಟಿ ರು. ಆಫರ್ ನೀಡುತ್ತಿದ್ದಾರೆ ಎಂದು ಸುಳ್ಳು, ಆಧಾರ ರಹಿತ ಮತ್ತು ದುರುದ್ದೇಶ ಪೂರ್ವಕ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ವಿರುದ್ಧ ಬಿಜೆಪಿ ಕಾರ್‍ಯಕರ್ತರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಠಾಣೆಗೆ ದೂರು ಸಲ್ಲಿಸಿದ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು 100 ಕೋಟಿ ನೀಡಿ ಪಕ್ಷಾಂತರ ಮಾಡಲು ಪ್ರೇರೇಪಿಸುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿಕೆ ನೀಡಿರುವುದನ್ನು ಖಂಡಿಸಿದರು.

ಶಾಸಕರಾದವರು ತಮ್ಮ ಕೆಲಸಗಳು ಮತ್ತು ಸಾಧನೆಗಳನ್ನು ತೋರಿಸಿಕೊಂಡು ಜನರ ಮಧ್ಯೆ ಇರಬೇಕೇ ಹೊರತು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದರು.

ಆಪರೇಷನ್ ಕಮಲ ಮಾಡುವ ಮೂಲಕ ನಾವು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗುವುದಿಲ್ಲ. ಬದಲಿಗೆ ಅವರವರ ಕಚ್ಚಾಟದಲ್ಲೇ ಸರ್ಕಾರ ಬಿದ್ದು ಹೋಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೂಡಲೇ ಡಿ.ಕೆ.ಶಿವಕುಮಾರ್, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸುತ್ತಾರೆ. ಆಗ ಸರ್ಕಾರವೇ ಬಿದ್ದುಹೋಗುತ್ತದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ದೂರುದಾರ ಸಿ.ಟಿ.ಮಂಜುನಾಥ್, ಮುಖಂಡರಾದ ವಿವೇಕ್, ಶಾರದ, ಪ.ನಾ.ಸುರೇಶ್, ಕ್ರಾಂತಿ ಮಂಜು, ಬಿ. ಕೃಷ್ಣ, ಶಂಕರ್, ಧರಣಿ ಇತರರು ಇದ್ದರು.