ಜೆಜಿ ಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಹೋರಾಟಕ್ಕೆ ನೂರು ದಿನ

| Published : Sep 28 2024, 01:31 AM IST

ಸಾರಾಂಶ

ತಾಲೂಕಿನ ಜೆಜಿ ಹಳ್ಳಿಯ ಕೆರೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿಗೆ 100 ದಿನ ಪೂರೈಸಿದ್ದು, ಚಳವಳಿಯ ಮುಂದುವರೆದ ಭಾಗವಾಗಿ ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜೆಜಿ ಹಳ್ಳಿಯ ಕೆರೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿಗೆ 100 ದಿನ ಪೂರೈಸಿದ್ದು, ಚಳವಳಿಯ ಮುಂದುವರೆದ ಭಾಗವಾಗಿ ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗಿತ್ತು.

ಜೆಜಿ ಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾರುಕೋಲು ಚಾಟಿ ಬೀಸುತ್ತಾ, ಸರ್ಕಾರಗಳಿಗೆ ಧಿಕ್ಕಾರ ಕೂಗುತ್ತಾ ರೈತರು ಮೆರವಣಿಗೆ ನಡೆಸಿದರು.

ಇದೇ ವೇಳೆ ರೈತರನ್ನು ಉದ್ದೇಶಿಸಿ ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ, ನೂರು ದಿನದಿಂದ ವಿವಿಧ ರೀತಿಯ ಚಳವಳಿ ನಡೆಸುತ್ತಾ ಸರ್ಕಾರದ ಗಮನ ಸೆಳೆಯುತ್ತ ಇದ್ದರೂ ಸಹ ಸರ್ಕಾರ ಇದುವರೆಗೂ ಸ್ಪಂದಿಸಿ ನೀರು ಹರಿಸುವ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬದಿಗೊತ್ತಿ ಧರಣಿ ನಡೆಸುತ್ತಿದ್ದರೂ, ಸರ್ಕಾರ ಇತ್ತ ಗಮನ ಹರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳದಿರುವುದು ಭಂಡನದ ಪರಮಾವಧಿಯಾಗಿದೆ. ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದರೂ, ಮಳೆ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಂಕಷ್ಟ ಬಂದೊದಗಿದೆ. ಸರ್ಕಾರ ಕೂಡಲೇ ಈ ಭಾಗದ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ಸಚಿವರು ಈ ಬರಗಾಲವನ್ನು ಸೂಕ್ಷ್ಮವಾಗಿ ಗಮನಿಸಿ ಲೈನಿಂಗ್ ಎಸ್ಟಿಮೇಟ್ ಮಾಡಿಸಿ, ಡಿಪಿ ಆರ್ ಸಿದ್ದಪಡಿಸಿ, ಸರ್ಕಾರದಿಂದ ಮಂಜೂರಾತಿ ಕೊಡಿಸಿ ಶೀಘ್ರವೇ ಕಾಮಗಾರಿ ಮಾಡಲು ಮುಂದಾಗಬೇಕು. ವಿಳಂಬವಾದಲ್ಲಿ ಹಿರಿಯೂರು ಬಂದ್ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆಲೂರು ಸಿದ್ದರಾಮಣ್ಣ, ಈರಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಎಂಆರ್ ಈರಣ್ಣ, ಅಶ್ವತಪ್ಪ, ವಜೀರ್ ಸಾಬ್, ನಟರಾಜ್, ವೆಂಕಟೇಶ್ ಬಳಗಟ್ಟ, ತಿಮ್ಮಯ್ಯ ಎವಿ ಕೊಟ್ಟಿಗೆ, ಕೃಷ್ಣಮೂರ್ತಿ, ರಾಜಪ್ಪ, ಸೋಮೇರಹಳ್ಳಿ ಉಮಣ್ಣ, ಸೋಮಣ್ಣ, ರಾಜಕುಮಾರ್, ಅಮೀರ್ ಸಾಬ್, ತಿಪ್ಪೇಸ್ವಾಮಿ, ರಾಮಕೃಷ್ಣ, ಬಾಲಕೃಷ್ಣ, ಚಂದ್ರಪ್ಪ, ಕುಮಾರ್ ಮುಂತಾದವರು ಹಾಜರಿದ್ದರು.

ಜೆಜಿ ಹಳ್ಳಿ ಭಾಗದ ಕೆರೆಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಲು ಈಗಾಗಲೇ ಸಚಿವ ಡಿ. ಸುಧಾಕರ್ ಏತ ನೀರಾವರಿ ಯೋಜನೆಯ ಅನುಷ್ಠಾನದ ಕುರಿತು ಸಣ್ಣ ನೀರಾವರಿ ಸಚಿವರ ಜತೆ ಚರ್ಚೆ ನಡೆಸಿದ್ದಾರೆ. ಜೆಜಿ ಹಳ್ಳಿ ವ್ಯಾಪ್ತಿಯ 15 ಕೆರೆಗಳಿಗೆ ನೀರು ತುಂಬಿಸಲು ಕೂನಿಕೆರೆ ಸಮೀಪದ ವೇದಾವರಿ ನದಿ ಪಾತ್ರದಲ್ಲಿ ಬ್ಯಾರೇಜ್ ನಿರ್ಮಿಸಿ ಜಾಕ್ ವೆಲ್ ಪಂಪ್ ಹೌಸ್ ನಿಂದ ನೀರನ್ನು 180 ಮೀ ಎತ್ತರಕ್ಕೆ ಪಂಪ್ ಮಾಡಿ, 15 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ.

ಇದಕ್ಕಾಗಿ ಒಟ್ಟು 514 ಎಂಸಿಎಫ್ ಟಿ ನೀರು ಬೇಕಾಗುತ್ತದೆ. 2140 ಎಚ್ ಪಿಯ 7 ಪಂಪ್ ಗಳನ್ನು ಅಳವಡಿಸಿ ಸುಮಾರು 27 ಕಿ.ಮೀ ಉದ್ದಕ್ಕೆ ಏರು ಕೊಳವೆಯನ್ನು ಮತ್ತು 49.907 ಕಿಮೀ ಉದ್ದಕ್ಕೆ ಗುರುತ್ವಾಕರ್ಷಣೆ ಮೂಲಕ ಪೈಪ್ ಗಳನ್ನು ಹಾಕಿ ನೀರು ಎತ್ತಲು ಯೋಜನೆ ರೂಪಿಸಲಾಗಿದೆ. ಈ ಸಂದರ್ಭ ಸಣ್ಣ ನೀರಾವರಿ ಸಚಿವ ಬೋಸ್ ರಾಜು, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ರಾಘವನ್, ಭದ್ರಾ ಮೇಲ್ದಂಡೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಗಳ ಸಭೆ ನಡೆಸಲಾಗಿದೆ.