ನ್ಯಾಮತಿಯುಲ್ಲಿ ಶೇ.100 ಇ-ಆಫೀಸ್‌ ತಂತ್ರಾಂಶದಡಿ ಕರ್ತವ್ಯ

| Published : Aug 19 2025, 01:00 AM IST

ಸಾರಾಂಶ

ನ್ಯಾಮತಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಶೇ.100ರಷ್ಟು ಇ-ಆಫೀಸ್‌ ತಂತ್ರಾಂಶದಡಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಕಚೇರಿಯ ವಿಷಯ ನಿರ್ವಾಹಕರು, ಶಿರಸ್ತೇದಾರರು ಹಾಗೂ ತಹಸೀಲ್ದಾರರಿಂದ ಇ-ಆಫೀಸ್‌ ತಂತ್ರಾಂಶ ಮೂಲಕವೇ ಕಡತಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಕಚೇರಿ ಹಂತದಲ್ಲಿ ಭೌತಿಕ ಕಡತಗಳ ನಿರ್ವಹಣೆಗೆ ತಿಲಾಂಜಲಿ ಇಡಲಾಗಿದೆ. ಆ.15ರ ನಂತರ ಗ್ರಾಮಾಡಳಿತ ಅಧಿಕಾರಿಗಳ ಹಂತಕ್ಕೂ ಇ-ಆಫೀಸ್‌ ತಂತ್ರಾಂಶ ಬಳಕೆ ವಿಸ್ತರಿಸಲಾಗುವುದು ಎಂದು ತಹಸೀಲ್ದಾರ್‌ ಕವಿರಾಜ್‌ ಹೇಳಿದ್ದಾರೆ.

- ಗ್ರಾಮಾಡಳಿತ ಹಂತಕ್ಕೂ ಮುಂದೆ ತಂತ್ರಾಂಶ ವಿಸ್ತರಣೆ: ತಹಸೀಲ್ದಾರ್‌ ಕವಿರಾಜ್‌ ಮಾಹಿತಿ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದ ತಾಲೂಕು ಕಚೇರಿಯಲ್ಲಿ ಶೇ.100ರಷ್ಟು ಇ-ಆಫೀಸ್‌ ತಂತ್ರಾಂಶದಡಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಕಚೇರಿಯ ವಿಷಯ ನಿರ್ವಾಹಕರು, ಶಿರಸ್ತೇದಾರರು ಹಾಗೂ ತಹಸೀಲ್ದಾರರಿಂದ ಇ-ಆಫೀಸ್‌ ತಂತ್ರಾಂಶ ಮೂಲಕವೇ ಕಡತಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಕಚೇರಿ ಹಂತದಲ್ಲಿ ಭೌತಿಕ ಕಡತಗಳ ನಿರ್ವಹಣೆಗೆ ತಿಲಾಂಜಲಿ ಇಡಲಾಗಿದೆ. ಆ.15ರ ನಂತರ ಗ್ರಾಮಾಡಳಿತ ಅಧಿಕಾರಿಗಳ ಹಂತಕ್ಕೂ ಇ-ಆಫೀಸ್‌ ತಂತ್ರಾಂಶ ಬಳಕೆ ವಿಸ್ತರಿಸಲಾಗುವುದು ಎಂದು ತಹಸೀಲ್ದಾರ್‌ ಕವಿರಾಜ್‌ ಹೇಳಿದ್ದಾರೆ.

ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಡಿಜಿಟಲೀಕರಣ ಆಗಿರುವ ಕಂದಾಯ ಇಲಾಖೆಯ ವಿವಿಧ ಆನ್‌ಲೈನ್‌ ಸೇವೆಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ನ್ಯಾಮತಿ ತಾಲೂಕಿನಲ್ಲಿ ಭೂ ಸುರಕ್ಷಾ ಯೋಜನೆಯಡಿ ತಾಲೂಕು ಕಚೇರಿಯ ಪ್ರಮುಖ ಭೂ ದಾಖಲೆಗಳ ಡಿಜಿಟಲೀಕರಣವನ್ನು ಕಂದಾಯ ಇಲಾಖೆ ಕೈಗೆತ್ತಿಗೊಂಡಿದೆ. ಭೂ ದಾಖಲೆಗಳ ವರ್ಗೀಕರಣ ಹಾಗೂ ಸ್ಕ್ಯಾನಿಂಗ್‌ ಮೂಲಕ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ಭೂ ದಾಖಲೆಗಳ ರಕ್ಷಣೆ ಮತ್ತು ನಕಲಿ ದಾಖಲೆ ಸೃಷ್ಟಿ ತಪ್ಪಲಿದೆ. ಸಾರ್ವಜನಿಕರು ವಿವಿಧ ಆದೇಶಗಳ ದೃಢೀಕರಣ ಪ್ರತಿಗಳಿಗೆ ಕಚೇರಿಗೆ ಅಲೆದಾಡುವುದೂ ತಪ್ಪಲಿದೆ ಎಂದಿದ್ದಾರೆ.

ತಾಲೂಕು ಕಚೇರಿ ಅಭಿಲೇಖಾಲಯಗಳಲ್ಲಿ ಶಿರಸ್ತೇದಾರರಿಂದ ಪರಿಶೀಲಿಸಿರುವ ದಾಖಲೆಗಳನ್ನು ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ಸ್ವತಃ ಸಾರ್ವಜನಿಕರೇ ಪಡೆಯಬಹುದು. ಇಲ್ಲದಿದ್ದರೆ ಅಭಿಲೇಖಾಲಯಗಳ ಕೇಂದ್ರಗಳಿಗೆ ಭೇಟಿ ನೀಡಿ ಡಿಜಿಟಲ್‌ ಸಹಿ ಇರುವ ದಾಖಲೆಗಳನ್ನು ಪಡೆಯಬಹುದು. ಆಕಸ್ಮಿಕವಾಗಿ ಭೂ ದಾಖಲೆ ಸ್ಕ್ಯಾನಿಂಗ್‌ ಆಗದೇ ಇದ್ದರೆ ಶಿರಸ್ತೇದಾರರಿಂದ ದೃಢೀಕರಿಸಿ ಡಿಜಿಟಲ್‌ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ವಿತರಿಸುವಂತೆ ಸರ್ಕಾರ ಆದೇಶ ಮಾಡಿದೆ ಎಂದು ತಿಳಿಸಿದ್ದಾರೆ.

ಸರ್ವೆ ಇಲಾಖೆಯ ದಾಖಲೆಗಳಾದ ಅಟ್ಲಾಸ್‌, ಟಿಪ್ಪಣಿ, ಪಕ್ಕಬುಕ್‌, ರೀ ಸರ್ವೆ ಪ್ರತಿ, ಖರ್ದಾ ಪ್ರತಿ, ಆಕಾರ ಬಂದ್‌ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಈಗಾಗಲೇ ಸ್ಕ್ಯಾನಿಂಗ್‌ ಮಾಡಲಾಗಿದೆ. ಡಿಜಿಟಲ್‌ ಪ್ರತಿಗಳು ಸಾರ್ವಜನಿಕರಿಗೆ ಲಭ್ಯವಿದೆ. ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಸಂಪೂರ್ಣವಾಗಿ ಆರ್‌ಸಿಸಿಎಂಎಸ್‌ ತಂತ್ರಾಶದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಕಂದಾಯ ಅಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಈ ತಂತ್ರಾಂಶದಲ್ಲಿ ಲಭ್ಯವಿದೆ. ಕಂದಾಯ ಇಲಾಖೆಯು ಕಂದಾಯ ಕೋರ್ಟ್ ಆದೇಶಗಳಿಗೆ ಡಿಜಿಟಲ್‌ ಸಹಿ ಕಡ್ಡಾಯಗೊಳಿಸಿದೆ. ಸಾರ್ವಜನಿಕರು ಡಿಜಿಟಲ್‌ ಸಹಿ ಹೊಂದಿರುವ ಆದೇಶಗಳನ್ನು ಪೋರ್ಟಲ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಹಸೀಲ್ದಾರ್‌ ವಿವರಿಸಿದ್ದಾರೆ.

- - -

(-ಫೋಟೊ: ಕವಿರಾಜ್‌)