ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಶತಕ!
KannadaprabhaNewsNetwork | Published : Oct 06 2023, 12:07 PM IST
ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಶತಕ!
ಸಾರಾಂಶ
ಕೃಷಿ ಇಲಾಖೆಯ ಒಟ್ಟು 171 ಹುದ್ದೆಗಳ ಪೈಕಿ 101 ಹುದ್ದೆಗಳು ಖಾಲಿ, ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ 25 ಹುದ್ದೆಗಳು ಖಾಲಿ, ಸಮರ್ಪಕ ಮಾಹಿತಿಗೆ ರೈತರ ಪರದಾಟ, ಜಾರಿಯಾಗದ ಯೋಜನೆಗಳು
ಶಹಾಪುರ/ಮಲ್ಲಯ್ಯ ಪೋಲಂಪಲ್ಲಿ: ಅನ್ನದಾತರಿಗೆ ಅಗತ್ಯ ಮಾಹಿತಿ, ಸರ್ಕಾರಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕಾದ ಕೃಷಿ ಇಲಾಖೆ ಸಿಬ್ಬಂದಿ ಕೊರತೆಯಿಂದ ನರಳುತ್ತಿದ್ದು, ಯಾದಗಿರಿ ಜಿಲ್ಲೆ ಕೃಷಿ ಇಲಾಖೆಯಲ್ಲಿ ಮಂಜೂರಾದ ಒಟ್ಟು ಹುದ್ದೆ 171ರ ಪೈಕಿ 70 ಹುದ್ದೆಗೆ ಮಾತ್ರ ಸಿಬ್ಬಂದಿಯಿದ್ದು, 101 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಇತರ ತಾಲೂಕುಗಳ ವಿಷಯ ಹಾಗಿರಲಿ. ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪಗೌಡ ದರ್ಶನಾಪೂರ್ ಅವರ ಸ್ವಕ್ಷೇತ್ರ ಶಹಾಪುರ ಮತಕ್ಷೇತ್ರದ ಕೃಷಿ ಇಲಾಖೆಯಲ್ಲಿ 39 ಹುದ್ದೆಗಳಲ್ಲಿ 14 ಹುದ್ದೆ ಭರ್ತಿಯಾಗಿದ್ದು, 25 ಖಾಲಿ ಬಿದ್ದಿರುವುದು ಪರಿಸ್ಥಿತಿ ಗಂಭೀರತೆಯನ್ನು ಸೂಚಿಸುತ್ತದೆ. ಇವುಗಳಲ್ಲಿ 13 ಕೃಷಿ ಅಧಿಕಾರಿಗಳಲ್ಲಿ 5 ಹುದ್ದೆಗಳು ಭರ್ತಿಯಾಗಿದ್ದು, 8 ಹುದ್ದೆಗಳು ಖಾಲಿ ಇವೆ. 15 ಸಹಾಯಕ ಕೃಷಿ ಅಧಿಕಾರಿಗಳ ಪೈಕಿ 3 ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ. ಉಳಿದಂತೆ ಕಚೇರಿ ಸಿಬ್ಬಂದಿ ಕೊರತೆ ಇದೆ. ಸುರಪುರದಲ್ಲಿ ಕೊರತೆ: ಸುರಪುರ ಕೃಷಿ ಇಲಾಖೆಯಲ್ಲಿ ಮಂಜೂರಾದ 49 ಹುದ್ದೆಗಳಲ್ಲಿ 14 ಹುದ್ದೆಗಳು ಭರ್ತಿಯಾಗಿದ್ದು, 26 ಖಾಲಿಯಿವೆ. ಇವುಗಳಲ್ಲಿ ಪ್ರಮುಖವಾಗಿ 9 ಕೃಷಿ ಅಧಿಕಾರಿಗಳ ಪೈಕಿ 5 ಹುದ್ದೆಗಳು ಭರ್ತಿಯಾಗಿದ್ದು, 4 ಹುದ್ದೆಗಳು ಖಾಲಿ ಇವೆ. ಯಾದಗಿರಿಯಲ್ಲಿ ಕೊರತೆ: ಯಾದಗಿರಿ ಕೃಷಿ ಇಲಾಖೆಯಲ್ಲಿ ಮಂಜೂರಾದ 38 ಹುದ್ದೆಗಳ ಪೈಕಿ 14 ಹುದ್ದೆಗಳು ಭರ್ತಿಯಾಗಿದ್ದು, 26 ಖಾಲಿಯಿವೆ. ಯಾದಗಿರಿ ಉಪಕೃಷಿ ನಿರ್ದೇಶಕರ ಇಲಾಖೆಯಲ್ಲಿ ಮಂಜೂರಾದ 19 ಹುದ್ದೆಗಳ ಪೈಕಿ 8 ಹುದ್ದೆಗಳು ಭರ್ತಿಯಾಗಿವೆ. 11 ಖಾಲಿಯಿವೆ. ಯಾದಗಿರಿ ಜಂಟಿ ಕೃಷಿ ನಿರ್ದೇಶಕರ ಇಲಾಖೆಯಲ್ಲಿ ಮಂಜೂರಾದ 29 ಹುದ್ದೆಗಳ ಪೈಕಿ 12 ಹುದ್ದೆಗಳು ಭರ್ತಿಯಾಗಿ 17 ಖಾಲಿಯಿವೆ. ಯೋಜನೆಗೆ ಭಗ್ನ: ಸರ್ಕಾರಿ ಯೋಜನೆಗಳಾದ ಬಿತ್ತನೆ, ವಿಮೆ, ಬೆಳೆ ಪರಿಹಾರ, ರಸಗೊಬ್ಬರ, ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಯಂತ್ರಧಾರೆ ಹೀಗೆ ನಾನಾ ಯೋಜನೆಗಳು ಕೃಷಿ ಇಲಾಖೆಯಲ್ಲಿ ರೂಪುಗೊಂಡಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಬೇಕಾದ ಸಿಬ್ಬಂದಿಯೇ ಇಲಾಖೆಯಲ್ಲಿ ಇಲ್ಲ. ಹೀಗಾಗಿ ಸರ್ಕಾರ ಯೋಜನೆಗಳನ್ನು ರೂಪಿಸಿದರೂ ರೈತರಿಗೆ ತಲುಪುತ್ತಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ರೈತರಿಗೆ ಸರಿಯಾದ ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳು ದೊರಕುತ್ತಿಲ್ಲ. ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಕೊರತೆ ಇರುವ ಹುದ್ದೆಗಳ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ರೈತ ಮುಖಂಡ ಬಸವರಾಜ್ ಭಜಂತ್ರಿ ಮನವಿ ಮಾಡಿದ್ದಾರೆ.