ಬಿಡಿಎ ಸಿಎ ಸೈಟ್‌ ಗುತ್ತಿಗೆ ನವೀಕರಣ ಶುಲ್ಕ ಪಾವತಿಸಿದರೆ ಬಡ್ಡಿ ಮನ್ನಾ

| N/A | Published : Jul 05 2025, 01:48 AM IST / Updated: Jul 05 2025, 10:12 AM IST

ಬಿಡಿಎ ಸಿಎ ಸೈಟ್‌ ಗುತ್ತಿಗೆ ನವೀಕರಣ ಶುಲ್ಕ ಪಾವತಿಸಿದರೆ ಬಡ್ಡಿ ಮನ್ನಾ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆ ಹಾಗೂ ಟ್ರಸ್ಟ್‌ಗಳು ನಾಗರಿಕ ಸೌಲಭ್ಯ (ಸಿಎ) ನಿವೇಶನಗಳ ಗುತ್ತಿಗೆ ನವೀಕರಣ ಶುಲ್ಕ ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ ಆಗಲಿದೆ.

 ಬೆಂಗಳೂರು :  ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆ ಹಾಗೂ ಟ್ರಸ್ಟ್‌ಗಳು ನಾಗರಿಕ ಸೌಲಭ್ಯ (ಸಿಎ) ನಿವೇಶನಗಳ ಗುತ್ತಿಗೆ ನವೀಕರಣ ಶುಲ್ಕ ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ ಆಗಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎನ್‌.ಎ.ಹ್ಯಾರಿಸ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಿವಿಧ ಸಂಘ, ಸಂಸ್ಥೆಗಳು ನಾಗರಿಕ ಸೌಲಭ್ಯದಡಿ ನಿವೇಶನ ಪಡೆದುಕೊಂಡಿವೆ. 1,600ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಗೆ ಸಿಎ ನಿವೇಶನ ಹಂಚಿಕೆಯಾಗಿದ್ದು, 30 ವರ್ಷಗಳಿಗೆ ಗುತ್ತಿಗೆ ಅವಧಿಯಿದೆ. ಕೆಲ ದೇವಸ್ಥಾನಗಳಿಗೆ ಆದಾಯ ಇರುವುದಿಲ್ಲ. ಹಾಗಾಗಿ ಗುತ್ತಿಗೆ ನವೀಕರಣ ಮಾಡಿಸಿಕೊಂಡಿರುವುದಿಲ್ಲ. 120 ದಿನದೊಳಗೆ ನಿವೇಶನ ನವೀಕರಣ ಶುಲ್ಕ ಪಾವತಿಸಿದರೆ, ಬಡ್ಡಿ ಮನ್ನಾ ಮಾಡಲಾಗುವುದು ಎಂದರು.

ಸುಮಾರು 250ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ನಿವೇಶನಗಳ ಗುತ್ತಿಗೆ ನವೀಕರಣ ಆಗಬೇಕಿದೆ. ಆಯಾ ಪ್ರದೇಶದ ಮಾರ್ಗಸೂಚಿ ಪ್ರಕಾರ ಶುಲ್ಕ ನಿಗದಿ ಮಾಡಲಾಗಿದೆ. ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ನಾಲ್ಕು ತಿಂಗಳ ಒಳಗಾಗಿ ನವೀಕರಣ ಶುಲ್ಕ ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಹೇಳಿದರು.

ಸಾರ್ವಜನಿಕರಿಗಾಗಿ ಸಹಾಯವಾಣಿ:

ಪ್ರಾಧಿಕಾರದ ಆಯುಕ್ತ ಮಣಿವಣ್ಣನ್‌ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ನಾಗರಿಕ ಸಹಾಯ ಕೇಂದ್ರ ಕಾರ್ಯಾರಂಭ ಮಾಡಿದ್ದು, ಕುಂದು ಕೊರತೆಗಳು ಅಥವಾ ಮನವಿಗಳ ಕುರಿತು 94831–66622 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು. ಈ ಸಹಾಯ ಕೇಂದ್ರ ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸಲಿದ್ದು, ಕರೆಗಳನ್ನು ಸ್ವೀಕರಿಸಿ ಕೇಂದ್ರದ ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ಐಪಿಜಿಆರ್‌ಎಸ್ ಲಾಗಿನ್ ಬಳಸಿ ತಂತ್ರಾಂಶದಲ್ಲಿ ಅಳವಡಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಿತ್ಯ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಎಂದರು.

ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್‌ ವೆಬ್ ಆ್ಯಪ್) ಅಥವಾ ನಾಗರಿಕ ಸಹಾಯ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಅಥವಾ ನೇರವಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳನ್ನು ಪರಿಶೀಲಿಸಿ 30 ದಿನದೊಳಗೆ ಪರಿಹಾರ (ಎಲ್‌1, ಎಲ್‌2, ಎಲ್‌3 ಪ್ರತಿ ಹಂತಗಳಿಗೆ ಗರಿಷ್ಠ ಹತ್ತು ದಿನಗಳು) ಒದಗಿಸಲಾಗುವುದು. ಪ್ರಾಧಿಕಾರದ ನಿಯಮಗಳ ಅನುಸಾರ ಕ್ರಮವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡಿ ಮುಕ್ತಾಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಕುಂದುಕೊರತೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೇಲ್ವಿಚಾರಣೆ ಜವಾಬ್ದಾರಿಯನ್ನು ಬಿಡಿಎ ಕಾರ್ಯದರ್ಶಿಗೆ ವಹಿಸಲಾಗಿದ್ದು ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿದೆ. ಕಾರ್ಯದರ್ಶಿಯವರಿಗೆ ಸಹಾಯಕ ನೋಡಲ್‌ ಅಧಿಕಾರಿಯನ್ನಾಗಿ ಭೂಸ್ವಾಧೀನ ಅಧಿಕಾರಿ -6 ಹಾಗೂ ಸಂಚಾಲಕರನ್ನಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.

Read more Articles on