ಸಾರಾಂಶ
ಕನ್ನಡಪ್ರಭ ವಾರ್ತೆ, ಬೀದರ್
ಹೈದ್ರಾಬಾದ್ ಕಡೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 100ಕೆಜಿ ಗಂಧದ ಕಟ್ಟಿಗೆಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಜಪ್ತಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.ಗುರುವಾರ ತಮ್ಮ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯ ಪೊಲೀಸಲು ಹಲವಾರು ಪ್ರಕರಣಗಳನ್ನು ಪತ್ತೆ ಮಾಡಿ ಸಾರ್ವಜನಿಕರ ಸ್ವತ್ತನ್ನು ವಾಪಸ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಬಸವಕಲ್ಯಾಣ, ಹುಮನಾಬಾದ್, ಮನ್ನಾಎಖ್ಖೇಳ್ಳಿ ಹೀಗೆ ಒಟ್ಟು 9 ಪ್ರಕರಣಗಳಲ್ಲಿ ನಗದು 4.28 ಲಕ್ಷ ರು. ಹೀಗೆ ಸುಮಾರು 55.56 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 7 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.ಹುಮನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಮನೆ ಕಳುವು ನೀರಿನ ಪಂಪಸೆಟ್ ಕಳುವು, ಬಂಗಾರ ಮಾರಾಟ ಮಾಡಿದ್ದು ಹೀಗೆ 5 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಅವರಿಂದ 28.35ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳು, ಸ್ವತ್ತು ಸೇರಿದಂತೆ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಬಂಗಾರ ಹಾಗೂ ಹಣ ಕಳೆದುಕೊಂಡ ವಾರಸುದಾರರಿಗೆ ಸ್ವತ್ತನ್ನು ಮರಳಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ್ ಹಾಗೂ ಚಂದ್ರಕಾಂತ ಪೂಜಾರಿ, ಹುಮನಾಬಾದ್ ಡಿವೈಎಸ್ಪಿ ಜೆಎಸ್ ನ್ಯಾಮೇಗೌಡ, ಡಿಆರ್ ಡಿಎಸ್‌ಪಿ ಶರಣಬಸಪ್ಪ ಕೂಡ್ಲಿ, ಸಿಪಿಐ ಗುರು ಪಾಟೀಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು. ಮೂವರು ಮಹಿಳೆಯರಿಂದ ಬಸ್‌ಸ್ಟಾಂಡಲ್ಲಿ ಕಳವು, ಸೆರೆ
ಇದಲ್ಲದೇ ಮನ್ನಾಎಖ್ಖೇಳ್ಳಿ ಬಸ್ ನಿಲ್ದಾಣದಲ್ಲಿ ಮೂವರು ಮಹಿಳೆಯರು ಬುರ್ಖಾಧಾರಿಗಳಾಗಿ ಕಳುವು ಮಾಡುತ್ತಿದ್ದನ್ನು ಪತ್ತೆ ಮಾಡಿ ಬಂಧಿಸಿ ಕಳುವು ಮಾಡಿ ಬಂದಿದ್ದ 4.28 ಲಕ್ಷ ರು. ನಗದು ವಶಕ್ಕೆ ಪಡೆಯಲಾಗಿದೆ. ಹೀಗೆ ಒಟ್ಟು 9 ಪ್ರಕರಣಗಳಲ್ಲಿ 55.6 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದು 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದರು.