ಸಾರಾಂಶ
ಸದ್ವರ್ತನೆ, ಸನ್ನಡತೆ ಆಧಾರದ ಮೇರೆಗೆ ಜಿಲ್ಲೆಯ ವಿವಿಧ ತಾಲೂಕಿನ 100 ಜನ ರೌಡಿಶಿಟರ್‌ಗಳನ್ನು ಪಟ್ಟಿಯಿಂದ ಕೈ ಬೀಡುವ ಮುಖಾಂತರ ಮತ್ತೊಮ್ಮೆ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಸಮಾಜ ಮುಖಿಯಾಗಿ ಬದಕಲು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆ
ಬೀದರ್: ಸದ್ವರ್ತನೆ, ಸನ್ನಡತೆ ಆಧಾರದ ಮೇರೆಗೆ ಜಿಲ್ಲೆಯ ವಿವಿಧ ತಾಲೂಕಿನ 100 ಜನ ರೌಡಿಶಿಟರ್‌ಗಳನ್ನು ಪಟ್ಟಿಯಿಂದ ಕೈ ಬೀಡುವ ಮುಖಾಂತರ ಮತ್ತೊಮ್ಮೆ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಸಮಾಜ ಮುಖಿಯಾಗಿ ಬದಕಲು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದರು.
ಶನಿವಾರ ಸಂಜೆ ಬೀದರ್ ಜಿಲ್ಲಾ ಪೊಲೀಸ್ ಸಮುದಾಯ ಪೊಲೀಸಿಂಗ್ ಭಾಗವಾಗಿ ರೌಡಿಗಳನ್ನು ಸಮಾಜ ಮುಖಿಯಾಗಿ ಪರಿಣಾಮಕಾರಿಯಾಗಿ ಪರಿವರ್ತನೆ ಮಾಡಲು ಸರ್ವ ಧರ್ಮದ ಗುರುಗಳನ್ನು ಆಹ್ವಾನಿಸಿದ್ದರು.ಇದರಲ್ಲಿ ಸಿದ್ದರಾಮ ಶರಣರು ಬೆಲ್ದಾಳ, ಓಂ ಶಾಂತಿ ರಾಜಯೋಗಿನಿ ಪ್ರತಿಮಾ ಬೆನ್, ಪೂಜ್ಯ ಭಂತೆ, ಗ್ಯಾನ ಸಾಗರ, ಪೂಜ್ಯ ಜ್ಞಾನಿ ದರಬಾರಾಸಿಂಗ್, ಮಹ್ಮದ ಆಸಿಫೋದ್ದಿನ್, ಮಹ್ಮದ ನಿಜಾಮೋದ್ದಿನ್, ನೆಲ್ಸನ್ ಸುಮಿತ್ರ ಅವರು ಸರ್ವ ಧರ್ಮಗಳು ಶಾಂತಿ ಮತ್ತು ದಯೆಯನ್ನು ಬೋಧಿಸುತ್ತವೆ ಎಂಬ ಹಿತವಚನಗಳನ್ನು ನುಡಿಯುವ ಮೂಲಕ ಎಲ್ಲಾ ಪ್ರವಾದಿಗಳ ಜೀವನ ದರ್ಶನ ಕುರಿತು ಹಲವಾರು ಉದಾಹರಣೆಗಳನ್ನು ನೀಡುವ ಮೂಲಕ ಆಶಿರ್ವಚನ ನೀಡಿದರು ಹಾಗೂ ಬೀದರ್ ಪೊಲೀಸರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವದನ್ನು ಪ್ರಶ೦ಸಿದರು.
ಬೀದರ್ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ಸಮಾಜ ಘಾತಕ ವ್ಯಕ್ತಿಗಳ ಮೇಲೆ, ಅಪರಾಧಿಕ ಹಿನ್ನೆಲೆ ಉಳ್ಳವರ ಮೇಲೆ ನಿಗಾ ಇಡಲು ರೌಡಿಶೀಟರ್‌ಗಳನ್ನು ತೆಗೆಯಲಾಗಿದ್ದು, ಅವರಲ್ಲಿ ಯಾರು ತಮ್ಮ ಮನ ಪರಿವರ್ತನೆಗೊಂಡು ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದಕುತ್ತಿದ್ದಾರೆ ಅವರಲ್ಲಿ ಮುಖ್ಯವಾಗಿ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಗಳಲ್ಲಿ ನೌಕರಿಯಿಂದ ವಂಚಿತಗೊಳ್ಳುತ್ತಿರುವವರನ್ನು ಮನಗಂಡು ಅವರನ್ನು ರೌಡಿ ಹಾಳೆಯಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಲಾಯಿತು.