ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಮ್ಮು, ಸೀನು, ಜ್ವರದಿಂದ ಬಳಲುತ್ತಿದ್ದರೂ ಅವರಿಗೆ ಯಾವುದೇ ಚಿಕಿತ್ಸೆ ಕೊಡಿಸದೆ ಮನೆಗೆ ಕಳಿಸುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ತಾಲೂಕಿನ ಬಾಡ ಗ್ರಾಮದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಮ್ಮು, ಸೀನು, ಜ್ವರದಿಂದ ಬಳಲುತ್ತಿದ್ದರೂ ಅವರಿಗೆ ಯಾವುದೇ ಚಿಕಿತ್ಸೆ ಕೊಡಿಸದೆ ಮನೆಗೆ ಕಳಿಸುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿದೆ.

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೫೩೬ ಇದೆ. ಸೆ. ೧ರಿಂದ ೫ರ ವರೆಗೆ ೧೦೬ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರಿಗೆ ಸಮರ್ಪಕ ಚಿಕಿತ್ಸೆ ಕೊಡಿಸುವ ಬದಲು ಮನೆಗೆ ಕಳುಹಿಸುತ್ತಿರುವುದಕ್ಕೆ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಓರ್ವ ಮಹಿಳಾ ಆರೋಗ್ಯ ಸಹಾಯಕಿ ಮಾತ್ರೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಮಕ್ಕಳ ಕುರಿತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಥವಾ ಸಮೀಪದ ಚಂದಾಪುರ ಆಸ್ಪತ್ರೆಗೆ ಸೂಕ್ತ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಒಂದೇ ಕಡೆ ಇರುವ ನೂರಾರು ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದರೆ ತಕ್ಷಣ ಶಾಲೆಗೆ ವೈದ್ಯಕೀಯ ತಂಡ ಕಳುಹಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಬಹುದಿತ್ತು. ಶಾಲಾ ಆಡಳಿತವೂ ಈ ಕುರಿತು ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಆತಂಕ ಬೇಡ- ಟಿಎಚ್‌ಒ

ಮಳೆ ಮತ್ತು ಬಿಸಿಲಿನ ವಾತಾವರಣದ ಬದಲಾವಣೆಯಿಂದ ವೈರಲ್ ಜ್ವರ, ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೊಳ್ಳೆ ನಿಯಂತ್ರಣ ಮತ್ತು ಸ್ವಚ್ಛತೆ ಕಾಪಾಡುವ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯಿಂದ ಯಾವುದೇ ಮಾಹಿತಿಯನ್ನು ತಿಳಿಸಿರುವದಿಲ್ಲ. ಮಂಗಳವಾರವೇ ಅಲ್ಲಿ ವೈದ್ಯಕೀಯ ತಂಡವನ್ನು ಕಳಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಶಿಗ್ಗಾಂವಿ ಟಿಎಚ್‌ಒ ಡಾ. ಸತೀಶ ಎ.ಆರ್. ತಿಳಿಸಿದ್ದಾರೆ.