ಸಾರಾಂಶ
ಎಲ್ಲರೂ ರಕ್ತದಾನದಲ್ಲಿ ಭಾಗವಹಿಸಬೇಕು. ರಕ್ತ ನೀಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆಗೆ ನೆರವಾಗಬೇಕು.
ಮರಿಯಮ್ಮನಹಳ್ಳಿ; ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 1000 ಲೀಟರ್ ರಕ್ತ ಸಂಗ್ರಹಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಹೈಸ್ಕೂಲ್ ಮೈದಾನದ ಆವರಣದಲ್ಲಿ ನ. 1ರಂದು ಕರ್ನಾಟಕ ರಾಜ್ಯೋತ್ಸವದಲ್ಲಿ ಸಿಂಧೂರ ಭಂಡಾರ ಬೃಹತ್ ಕಾರ್ಯಕ್ರಮದ ವೇದಿಕೆಯ ಸಿದ್ಧತೆ ವೀಕ್ಷಿಸಿ ನಂತರ ಅವರು ಮಾತನಾಡಿದರು. ಎಲ್ಲರೂ ರಕ್ತದಾನದಲ್ಲಿ ಭಾಗವಹಿಸಬೇಕು. ರಕ್ತ ನೀಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆಗೆ ನೆರವಾಗಬೇಕು ಎಂದರು.ಮರಿಯಮ್ಮನಹಳ್ಳಿ ಸೇರಿದಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಬಳ್ಳಾರಿ ವಿಮ್ಸ್ ರಕ್ತ ಭಂಡಾರ ನೇತೃತ್ವದಲ್ಲಿ ರಕ್ತ ಸಂಗ್ರಹ ಮಾಡುವ ಗುರಿ ಇದೆ. ಈ ನಿಟ್ಟಿನಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯ ತಂಬ್ರಹಳ್ಳಿ, ಮರಿಯಮ್ಮನಹಳ್ಳಿ, ಕೋಗಳಿ, ಕೊಟ್ಟೂರು ಹೋಬಳಿಗಳ ಎಲ್ಲ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣೆ ಮಾಡುವುದಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯೋತ್ನವ ಹಿನ್ನೆಲೆಯಲ್ಲಿ ನ. 1ರಂದು ಮಧ್ಯಾಹ್ನ 1 ಗಂಟೆಗೆ ಮರಿಯಮ್ಮನಹಳ್ಳಿಯ ಪಪಂನಿಂದ ಸ್ಕೂಲ್ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆ ವರೆಗೆ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಜಿಲ್ಲೆಯ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಸಂಜೆ 5 ಗಂಟೆಗೆ ಸಿಂಧೂರ ಭಂಡಾರ ಕಾರ್ಯಕ್ರಮ ನಡೆಯಲಿದೆ. ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು.ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.
ನಂತರ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ನೃತ್ಯ ಮತ್ತು ಹಾಸ್ಯ ವೈಭವ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದ ಪ್ರೇಮ್, ಖ್ಯಾತ ಸಂಗೀತ ಗಾಯಕರು ಹಾಗೂ ಹಾಸ್ಯ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.