ನರೇಗಾ ಕೂಲಿಕಾರರಿಂದ ಗವಿಮಠ ದಾಸೋಹಕ್ಕೆ 10 ಸಾವಿರ ರೊಟ್ಟಿ

| Published : Jan 14 2025, 01:02 AM IST

ಸಾರಾಂಶ

ನಗರದ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಿ ಸೇವೆ ಹರಿದು ಬರುತ್ತಿದೆ. ನಾನಾ ಗ್ರಾಮದ ಭಕ್ತರು ಮಹಾದಾಸೋಹಕ್ಕೆ ಸೇವೆ ಸಮರ್ಪಿಸುತ್ತಿದ್ದಾರೆ.

ಜೇವರ್ಗಿ ತಾಲೂಕಿನ ಹಾಗರಗುಂಡಿ ಗ್ರಾಮದಿಂದ 20 ಕ್ವಿಂಟಲ್‌ ಶೇಂಗಾ ಚಟ್ನಿಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಿ ಸೇವೆ ಹರಿದು ಬರುತ್ತಿದೆ. ನಾನಾ ಗ್ರಾಮದ ಭಕ್ತರು ಮಹಾದಾಸೋಹಕ್ಕೆ ಸೇವೆ ಸಮರ್ಪಿಸುತ್ತಿದ್ದಾರೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಪಂ ನರೇಗಾ ಕೂಲಿ ಕಾರ್ಮಿಕರ ವತಿಯಿಂದ ಹತ್ತು ಸಾವಿರ ರೊಟ್ಟಿ, ಎರಡು ಕ್ವಿಂಟಲ್‌ ಕರ್ಚಿಕಾಯಿ, ೫೦ ಕೆಜಿ ಧಾನ್ಯ ಅರ್ಪಿಸಲಿದ್ದಾರೆ.

ಹನುಮನಾಳದ ಹಾಗೂ ತುಗ್ಗಲದೋಣಿ ಭಕ್ತರು ರೊಟ್ಟಿ, ಕರ್ಚಿಕಾಯಿಯ ತಯಾರಿಯಲ್ಲಿದ್ದಾರೆ.

ಕುಷ್ಟಗಿ ತಾಲೂಕು ತಾವರಗೇರಾ ಹಾಗೂ ಹಂಚಿನಾಳ ಗ್ರಾಮಸ್ಥರು ಲಿಂಬಿಕಾಯಿ ಉಪ್ಪಿನಕಾಯಿ, ಹುಣಸೆಕಾಯಿ ಚಟ್ನಿ ತಯಾರು ಮಾಡಲಾಗುತ್ತಿದೆ. ಸುಮಾರು ೨೭ ಸಾವಿರ ನಿಂಬೆಹಣ್ಣುಗಳಿಂದ ತಯಾರಿಸಿದ ನಿಂಬೆಕಾಯಿ ಚಟ್ನಿಯನ್ನು ಹದಿನೈದು ದಿನಗಳ ಕಾಲ ನಡೆಯುವ ಜಾತ್ರಾ ಮಹಾದಾಸೋಹಕ್ಕಾಗಿ 2 ಗ್ರಾಮದ ಗ್ರಾಮಸ್ಥರು ತಯಾರಿಸಿ ಶ್ರೀಮಠಕ್ಕೆ ತಂದು ಅರ್ಪಿಸಲಿದ್ದಾರೆ.20 ಕ್ವಿಂಟಲ್‌ ಶೇಂಗಾ ಚಟ್ನಿ:

ಮಹಾದಾಸೋಹಕ್ಕೆ ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಹಾಗರಗುಂಡಿ ಗ್ರಾಮದಿಂದ ೨೦ ಕ್ವಿಂಟಲ್ ಶೇಂಗಾ ಚಟ್ನಿಯನ್ನು ತಯಾರಿಸಿದ್ದಾರೆ. ಶೇಂಗಾವನ್ನು ಕೈಯಿಂದ ಕುಟ್ಟಿ ಪುಡಿ ಮಾಡಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಗ್ರಾಮಸ್ಥರು ಜ.14ರಂದು ಶ್ರೀಮಠಕ್ಕೆ ಚಟ್ನಿ ಅರ್ಪಿಸಲಿದ್ದಾರೆ. ಬ್ಯಾಡಗಿ ನಗರದ ಮೆಣಸಿನಕಾಯಿ ವರ್ತಕರಿಂದ ಜಾತ್ರಾ ಮಹಾದಾಸೋಹಕ್ಕಾಗಿ ಸುಮಾರು ೨೧ ಚೀಲ ಮೆಣಸಿನಕಾಯಿ ಚೀಲಗಳನ್ನು ಕೆಂಪು ಚಟ್ನಿ ತಯಾರ ಮಾಡುವುದಕ್ಕಾಗಿ ಸಲ್ಲಿಸಿದ್ದಾರೆ. ಕೊಪ್ಪಳ ತಾಲೂಕಿನ ಗುಡಗೇರಿ ಗ್ರಾಮದ ಭಕ್ತರು ೩೦೦೦ ರೊಟ್ಟಿ, ೨ ಹೆಸರು ಪ್ಯಾಕೆಟ್‌ ಇತರ ಧಾನ್ಯ, ರೋಣ ತಾಲೂಕು ಇಟಗಿ ಗ್ರಾಮದ ಗವಿಸಿದ್ದೇಶ್ವರ ಶಾಖಾಮಠದ ಭಕ್ತರು ಮಹಾಪ್ರಸಾದಕ್ಕೆ ೧೧ ಕ್ವಿಂಟಲ್ ಲಾಡು ಸಮರ್ಪಿಸಿದ್ದಾರೆ.