ಮುಂಗಾರಿನಲ್ಲಿ ಬಿತ್ತನೆಗೊಂಡ ಬೆಳೆಗಳು ಮಳೆ ಕೊರತೆಯಿಂದ ಸಂಪೂರ್ಣ ಬಾಡಿವೆ

ಯಲಬುರ್ಗಾ: ಮಳೆ ಬರುವಿಕೆಗೆ ಕೆಲ ಹಳ್ಳಿಗಳಲ್ಲಿ ಗುರ್ಜಿ ಪೂಜೆ, ಸಪ್ತ ಭಜನೆ ಹೀಗೆ ನಾನಾ ರೀತಿಯ ಆಚರಣೆಗಳು ನಿತ್ಯ ನಡೆಯುತ್ತಿವೆ. ಆದರೆ ದಮ್ಮೂರು ಗ್ರಾಮದಲ್ಲಿ ಊರಿನ ಅಗಸಿಕಲ್ಲಿಗೆ ಗುರು ಹಿರಿಯರಿಂದ ೧೦೧ ಕೊಡ ಜಲಾಭಿಷೇಕ ಮತ್ತು ಎಲ್ಲ ದೇವರಿಗೆ ಅಭಿಷೇಕ ಪೂಜೆ ನಡೆಸಲಾಯಿತು.

ಮುಂಗಾರು ಮಳೆ ಆರಂಭದಲ್ಲಿ ಅಲ್ಪಸ್ವಲ್ಪ ಮಟ್ಟಿಗೆ ಸುರಿದ ಕಾರಣ ರೈತರು ನಾನಾ ಬೀಜ ಬಿತ್ತನೆ ಮಾಡಿದ್ದರು. ಹಲವು ದಿನಗಳಿಂದ ಮಳೆ ಬಾರದೆ ಬೆಳೆಗಳು ಒಣಗುತ್ತಿವೆ. ವರುಣನ ಆಗಮನಕ್ಕೆ ರೈತರು, ಮಹಿಳೆಯರು ಮಕ್ಕಳಿಂದ ನಾನಾ ಬಗೆಯ ಧಾರ್ಮಿಕ ಆಚರಣೆ ನಡೆಸಿದರೂ ಮಳೆ ಬರುತ್ತಿಲ್ಲ. ಹೀಗಾಗಿ ಜನರು ಮಾಡುತ್ತಿರುವ ಪ್ರಾರ್ಥನೆ ಫಲಿಸುತ್ತಿಲ್ಲ. ಇಷ್ಟಾದರೂ ರೈತರು ಇಂದಲ್ಲ ನಾಳೆ ಮಳೆ ಬಂದೇ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಸಪ್ತಭಜನೆ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ಸಪ್ತ ಭಜನೆ ಹಮ್ಮಿಕೊಳ್ಳಲಾಗಿದೆ. ಬೆಳಗಿನ ಜಾವ ತಣ್ಣೀರಿನ ಸ್ನಾನ ಮಾಡಿ ದೇವರ ನಾಮಸ್ಮರಣೆ ಮಾಡಲಾಗುತ್ತಿದೆ. ಅಲ್ಲದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲ್ಲ ದೇವರಿಗೂ ಪೂಜೆ ಮಾಡಲಾಗುತ್ತಿದೆ. ಮಹಿಳೆಯರಿಂದ ಮಳೆ ಬೆಳೆ ಕುರಿತ ಹಾಡು ಹಾಡಲಾಗುತ್ತದೆ. ಇಷ್ಟಾದರೂ ಮಳೆ ಸುರಿಯದಿರುವ ಬಗ್ಗೆ ರೈತರು ಚಿಂತೆಗೀಡಾಗಿದ್ದಾರೆ.

ಮುಂಗಾರಿನಲ್ಲಿ ಬಿತ್ತನೆಗೊಂಡ ಬೆಳೆಗಳು ಮಳೆ ಕೊರತೆಯಿಂದ ಸಂಪೂರ್ಣ ಬಾಡಿವೆ. ಮಳೆಗಾಗಿ ಪ್ರಾರ್ಥಿಸಿ ಊರಿನ ಗುರು ಹಿರಿಯರು ಸೇರಿಕೊಂಡು ಗ್ರಾಮದ ಎಲ್ಲ ದೇವರಿಗೆ ವಿಶೇಷ ಅಭಿಷೇಕ ಪೂಜೆ ಮಾಡಿಸಲಾಗಿದೆ. ಅಲ್ಲದೆ ಅಗಸಿ ಕಲ್ಲಿಗೆ ೧೦೧ ಕೊಡ ಜಲಾಭಿಷೇಕ ನೆರವೇರಿಸಲಾಗಿದೆ. ಇಂದಲ್ಲ ನಾಳೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಗ್ರಾಮಸ್ಥರಾದ ಭೀಮಣ್ಣ ಜರಕುಂಟಿ, ಸಂಗಪ್ಪ ಕೆಂಚನಗೌಡ್ರ, ಯನಮಪ್ಪ ಹಳ್ಳಿಕೇರಿ, ಶರಣಗೌಡ ದ್ಯಾಮನಗೌಡ, ಹನುಮಂತಪ್ಪ, ವೀರಪ್ಪ ರ್ಯಾವಣಕಿ, ಭೀಮಪ್ಪ ಕಮ್ಮಾರ, ಶರಣಯ್ಯ ಹಿರೇಮಠ ತಿಳಿಸಿದ್ದಾರೆ.