ಎನ್.ಆರ್.ಪುರ ತಾಲೂಕಿನ 105 ಜನರಿಗೆ ಎಚ್.ಐ.ವಿ.ಸೋಂಕು: ಪಿ.ಪಿ.ಬೇಬಿ

| Published : Apr 04 2025, 12:48 AM IST

ಸಾರಾಂಶ

ನರಸಿಂಹರಾಜಪುರ, ಎಚ್ ಐವಿ, ಏಡ್ಸ್ ಗೆ ಲಸಿಕೆ ಬಂದಿಲ್ಲ. ಈ ಕಾಯಿಲೆ ಗುಣಪಡಿಸುವ ಔಷಧಿಯೂ ಇಲ್ಲ. ಶಿಕ್ಷಣದ ಮೂಲಕ, ಮಾಹಿತಿ ಹಂಚುವ ಮೂಲಕ ಮಾತ್ರ ಈ ಕಾಯಿಲೆ ವಿರುದ್ಧ ಜಯಗಳಿಸಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ ಹೇಳಿದರು.

ಏಡ್ಸ್ ಲಸಿಕೆ ಬಂದಿಲ್ಲ; ಸರ್ಕಾರಿ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎಚ್ ಐವಿ, ಏಡ್ಸ್ ಗೆ ಲಸಿಕೆ ಬಂದಿಲ್ಲ. ಈ ಕಾಯಿಲೆ ಗುಣಪಡಿಸುವ ಔಷಧಿಯೂ ಇಲ್ಲ. ಶಿಕ್ಷಣದ ಮೂಲಕ, ಮಾಹಿತಿ ಹಂಚುವ ಮೂಲಕ ಮಾತ್ರ ಈ ಕಾಯಿಲೆ ವಿರುದ್ಧ ಜಯಗಳಿಸಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಬೇಬಿ ಹೇಳಿದರು.ಗುರುವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ನಡೆದ ಎಚ್ ಐವಿ, ಏಡ್ಸ್ ಕುರಿತು ಜಾಗೃತಿ ಮತ್ತು ಭಿತ್ತಿಪತ್ರ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಆರೋಗ್ಯದ ಅರಿವು ಮೂಡಿಸಲು ವಿಶೇಷವಾಗಿ ಎಚ್ ಐವಿ, ಏಡ್ಸ್ ಕುರಿತು ಅರಿವು ಮೂಡಿಸಲು ಇರುವ ಏಕಮಾತ್ರ ಕ್ಲಬ್ ಎಂದರೆ ರೆಡ್ ರಿಬ್ಬನ್ ಕ್ಲಬ್ ಮಾತ್ರ. ಹದಿಹರೆಯದವರಲ್ಲಿ ಎಚ್ ಐವಿ ಮತ್ತು ಏಡ್ಸ್ ಬಗ್ಗೆ ಅರಿವು ಮೂಡಿಸುವುದು, ರಕ್ತ ದಾನದ ಮಹತ್ವ ತಿಳಿಸಿ, ರಕ್ತದಾನಕ್ಕೆ ಪ್ರೇರೆಪಿಸುವುದು, ಎಚ್ ಐವಿ ಪೀಡಿತರಿಗೆ ಮಾನಸಿಕ ಸಾಂತ್ವನ ನೀಡುವುದು, ಎಚ್ ಐವಿ ಪೀಡಿತರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು, ಎಚ್ ಐವಿ ಪೀಡಿತರ ಸಂಖ್ಯೆ ಕಡಿಮೆ ಮಾಡುವುದು ರೆಡ್ ರಿಬ್ಬನ್ ಕ್ಲಬ್ ನ ಪ್ರಮುಖ ಉದ್ದೇಶ ಎಂದರು.

ಎಚ್ ಐ ವಿ ಮತ್ತು ಏಡ್ಸ್ ಶೇ.84 ರಷ್ಟುಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಬರುತ್ತದೆ. ಎಚ್ ಐವಿ ಸೋಂಕಿತ ವ್ಯಕ್ತಿಯಿಂದ ರಕ್ತ ಪಡೆಯುವುದರಿಂದ, ಸೂಜಿ, ಸಿರಂಜ್ ನಿಂದ ಎಚ್ ಐವಿ ಪೀಡಿತ ತಾಯಿಯಿಂದ ಮಗುವಿಗೆ ಏಡ್ಸ್ ಬರುವ ಸಾಧ್ಯತೆ ಹೆಚ್ಚಿದೆ. ದೇಶದ ಒಟ್ಟು ಯುವ ಜನಸಂಖ್ಯೆಯಲ್ಲಿ ಶೇ.48 ರಷ್ಟು ಹದಿಹರೆಯದವರಲ್ಲಿ ಏಡ್ಸ್ ಸೋಂಕು ಇದೆ. ನರಸಿಂಹ ರಾಜಪುರ ತಾಲೂಕಿನ ವ್ಯಾಪ್ತಿಯಲ್ಲಿ 105 ಎಚ್ ಐವಿ,ಏಡ್ಸ್ ಪ್ರಕರಣಗಳಿದ್ದು 7 ಜನರು ಮರಣ ಹೊಂದಿದ್ದಾರೆ. ಉಳಿದವರು ಎಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಗರ್ಭಧರಿಸುವ ಪ್ರಮಾಣ ಹೆಚ್ಚಾಗುತ್ತಿದೆ. ತಾಲೂಕಿನ ವ್ಯಾಪ್ತಿಯಲ್ಲೂ ಹಲವು ಪ್ರಕರಣಗಳು ಕಂಡು ಬಂದಿವೆ. ಯುವಜನಾಂಗ ನೈತಿಕತೆ ಬೆಳೆಸಿಕೊಳ್ಳುವ ಮೂಲಕ ವಿವಾಹ ಪೂರ್ವ ಲೈಂಗಿಕ ಸಂಪರ್ಕ ಮಾಡಬಾರದು ಎಂದರು.ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಧನಂಜಯ ಮಾತನಾಡಿ, ಆರೋಗ್ಯವಂತ ಯುವ ಜನಾಂಗ ಇದ್ದಾಗ ಮಾತ್ರ ದೇಶ ಅಭಿವೃದ್ಧಿಹೊಂದಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಬಲಿ ಯಾಗಿ ಏಡ್ಸ್, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಬಲಿಯಾಗುತ್ತಿರುವುದು ದುರಂತ. ಆಧುನಿಕ ಯುಗದಲ್ಲಿ ಬಹು ತೇಕರು ಹಣ, ಹೆಸರುಗಳಿಸುವ ದಾವಂತದಲ್ಲಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಯುವಜನಾಂಗ, ನೈತಿಕತೆ, ಸತ್ಯ, ಪ್ರಾಮಾಣಿಕತೆ, ಉತ್ತಮ ಜೀವನ ಶೈಲಿ ಮೂಲಕ ಉತ್ತಮ ಆರೋಗ್ಯಹೊಂದಬೇಕು. ಆರೋಗ್ಯದ ಬಗ್ಗೆ ಅರಿವು ಹೊಂದಿ ಸಮಾಜದಲ್ಲಿ ವಿದ್ಯಾರ್ಥಿಗಳು ಪ್ರಚಾರ ಮಾಧ್ಯಮಗಳಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿ ಡಾ. ವಿನಯ್, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ವಿಶ್ವನಾಥ್, ಮೇರಿ, ಐಕ್ಯೂಎಸ್ ಸಿ ಸಂಚಾಲಕ ಪ್ರಸಾದ್, ಕನ್ನಡ ವಿಭಾಗದ ಮುಖ್ಯಸ್ಥೆ ಸವಿತಾ ಇದ್ದರು.

ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ವಿಜೇತ ಕೆ.ಎಸ್.ಸೃಷ್ಠಿ ಪ್ರಥಮ ,ಬಿ.ಆರ್.ಸ್ಪೂರ್ತಿ ದ್ವಿತೀಯ, ಗಾನವಿ ತೃತೀಯ ನಗದು ಬಹುಮಾನ ವಿತರಿಸಲಾಯಿತು.