ಡಾ.ಜಿ.ಪರಮೇಶ್ವರ ರವರು ಮುಖ್ಯಮಂತ್ರಿಯಾಗಲಿ ಎಂದು ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿ ೧೦೮ ತೆಂಗಿನ ಕಾಯಿ ಹೊಡೆದು ಹರಕೆಯನ್ನು ತೀರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಡಾ.ಜಿ.ಪರಮೇಶ್ವರ ರವರು ಮುಖ್ಯಮಂತ್ರಿಯಾಗಲಿ ಎಂದು ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿ ೧೦೮ ತೆಂಗಿನ ಕಾಯಿ ಹೊಡೆದು ಹರಕೆಯನ್ನು ತೀರಿಸಿದ್ದಾರೆ. ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ರವರು ೮ ವರ್ಷಗಳ ಕಾಲ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ೨೦೧೩ರಲ್ಲಿ ಮತ್ತು ೨೦೧೮ ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದಾರೆ. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಿಲ್ಲ ಈಗ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಸ್ಥಾನದಿಂದ ಬದಲಾದರೆ ಡಾ.ಜಿ.ಪರಮೇಶ್ವರ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ಲಕ್ಷಾಂತರ ಜನರ ಒತ್ತಾಯವಾಗಿದೆ, ಆದ್ದರಿಂದ ನಾವು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದಿದ್ದೇವೆ ಎಂದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕರೆ ಶಂಕರ್ ಮಾತನಾಡಿ ಡಾ.ಜಿ. ಪರಮೇಶ್ವರ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದು ಎಲ್ಲಾ ಜನಾಂಗದ ನಾಯಕರಾಗಿದ್ದು ಕಳಂಕ ರಹಿತ ಸ್ವಚ್ಛ ರಾಜಕಾರಣಿಯಾಗಿದ್ದಾರೆ. ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರೆಂಟಿ ಸಮಿತಿ ಅಧ್ಯಕ್ಷರಾಗಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಡಾ.ಜಿ.ಪರಮೇಶ್ವರ ರವರ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ, ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟೀಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಈಗ ಸಿ.ಎಂ. ಬದಲಾವಣೆ ಕೂಗು ಕೇಳಿ ಬರುತ್ತಿದೆ, ಕಾಂಗ್ರೆಸ್ ಪಕ್ಷದ ವರಿಷ್ಠರು ಡಾ.ಜಿ.ಪರಮೇಶ್ವರ್‌ ರವರ ಸೇವೆ, ವ್ಯಕ್ತಿತ್ವ, ಅರ್ಹತೆ ಗುರುತಿಸಿ ಮುಖ್ಯಮಂತ್ರಿ ಮಾಡಲೇಬೇಕು ಎಂದರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಲರಾಮಯ್ಯ, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಮಹಾಲಿಂಗಪ್ಪ, ಜಯರಾಮ್, ಎಲ್.ರಾಜಣ್ಣ, ಕೆ.ಆರ್.ಓಬಳರಾಜು, ಟಿ.ಸಿ.ರಾಮಯ್ಯ, ಉಮಾಶಂಕರ್, ವಿನಯ್‌ಕುಮಾರ್, ಕಾರ್‌ಮಹೇಶ್, ಉಮೇಶ್ (ಗೋಟು) ನಾರಾಯಣಪ್ಪ, ವೆಂಕಟಪ್ಪ, ನರಸಿಂಹಮೂರ್ತಿ, ಸೇರಿದಂತೆ ಹಲವರು ಹಾಜರಿದ್ದರು.