ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರದಿಂದ ಹಲವು ಮಹನೀಯರ ಜಯಂತಿ ಮಾಡುವಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವವನ್ನೂ ಲೋಕಾದ್ಯಂತ ಆಚರಿಸಬೇಕು ಎಂದು ಮಾಧ್ವ ವಿದ್ವಾಂಸರಾದ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ನಗರದ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಅಂಗವಾಗಿ ಮಂಗಳವಾರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.

ಅಂಬೇಡ್ಕರ್ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಗಾಂಧಿ ಜಯಂತಿಯಂದು ಸರ್ಕಾರ ರಜೆಯನ್ನೇ ಘೋಷಣೆ ಮಾಡುತ್ತದೆ. ಅದೇ ರೀತಿ ಮಹಾ ಮಹಿಮರಾದ ರಾಯರ ಜಯಂತಿಯನ್ನೂ ಎಲ್ಲೆಡೆ ವೈಭವದಿಂದ ಆಚರಿಸುವಂತಾಗಬೇಕು ಎಂದು ಹೇಳಿದರು.

ರಾಯರು ಮಾಡಿದ ಉಪಕಾರ ಅಷ್ಟಿಷ್ಟಲ್ಲ. ಅವರು ಅವತಾರ ಮಾಡದೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಬೇಕಾಗಿದೆ. ಅಂಥ ಮಹಾ ಮಹಿಮರು ರಾಘವೇಂದ್ರ ಸ್ವಾಮಿಗಳು ಎಂದು ತಿಳಿಸಿದರು.


ಸೂರ್ಯನ ಪ್ರಕಾಶ, ಚಂದ್ರನ ಬೆಳಕು, ನವಗ್ರಹಗಳ ಪ್ರಭೆ, ನಕ್ಷತ್ರ ಪುಂಜಗಳ ಪ್ರಕಾಶ, ವಜ್ರಾದಿ ಮಣಿಗಳ ಹೊಳಪು, ಸಾವಿರಾರು ಮಿಂಚುಗಳ ಬೆಳಕನ್ನು ಒಟ್ಟುಗೂಡಿಸಿದರೆ ರಾಯರ ಜ್ಞಾನದ ಬೆಳಕಿಗೆ ಸಮವಾಗುತ್ತದೆ. ಅವರ ಗ್ರಂಥಗಳ ಹೆಸರಿನಲ್ಲಿ ‘ದೀಪ’ ಎಂಬ ಶಬ್ದ ಸಾಮಾನ್ಯವಾಗಿ ಇರುವುದನ್ನು ಗಮನಿಸಬಹುದು ಎಂದು ಹೇಳಿದರು.

ಇದೇ ವೇಳೆ ಶ್ರೀ ಗುರುರಾಜ ಸೇವಾ ಸಂಘದಿಂದ ಶ್ರೀಪಾದಂಗಳವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನ ಕುಮಾರ್, ಸದಸ್ಯರಾದ ಗುರುರಾಜಾಚಾರ್ಯ ಕಂಪ್ಲಿ, ಡಾ. ಆನಂದತೀರ್ಥಾಚಾರ್ ಸಿ.ಕೆ, ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯರಾವ್ ನರಗನಹಳ್ಳಿ, ಖಜಾಂಚಿ ವಾಗೀಶಾಚಾರ್ ಎಂ, ಪ್ರಾಣೇಶಾಚಾರ್ ಕಡೂರು, ವಾಚಸ್ಪತಿ ಆಚಾರ್ಯ, ಎನ್.ಡಿ. ಶ್ರೀನಿವಾಸರಾವ್ ನರಗನಹಳ್ಳಿ, ವೆಂಕಟೇಶ ನವರತ್ನ, ಪಿ.ಕೆ.ಪ್ರಕಾಶ್ ಇದ್ದರು.

ಪರಮಾತ್ಮನ ಪ್ರತಿನಿಧಿಯಾಗಿ ರಾಘವೇಂದ್ರರು ಬಂದರು

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಪರಮಾತ್ಮನ ಪ್ರತಿನಿಧಿಯಾಗಿ ಬಂದು, ಭಗವಂತನ ಪ್ರಜೆಗಳಾದ ಭಕ್ತರನ್ನು ಉದ್ಧಾರ ಮಾಡಿದವರು ಎಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ಬಣ್ಣಿಸಿದರು.

ರಾಯರ ಮಹಿಮೆ ಅಪಾರವಾದುದು. ಪ್ರತಿಯೊಬ್ಬರ ಜೀವನದಲ್ಲೂ ಅವರು ಅನುಗ್ರಹ ಮಾಡಿದ್ದಾರೆ. ಅನೇಕರಿಗೆ ಆರೋಗ್ಯ, ಸಂತಾನ ಮುಂತಾದ ಭಾಗ್ಯಗಳನ್ನು ಕರುಣಿಸಿದ್ದಾರೆ. ಲೌಕಿಕ ಮತ್ತು ಆಧ್ಯಾತ್ಮಿಕವಾಗಿ ಭಕ್ತರಿಗೆ ಬೇಕಾಗಿದ್ದನ್ನು ನೀಡಿದ್ದಾರೆ ಎಂದು ತಿಳಿಸಿದರು.

ಗುರು ಸಾರ್ವಭೌಮರು ಸಮುದ್ರವಿದ್ದಂತೆ. ಗಂಗೆ, ತುಂಗಭದ್ರೆ ಮುಂತಾದ ನದಿಗಳೆಲ್ಲವೂ ಸಾಗರವನ್ನು ಸೇರುವಂತೆ ಅವರು ಜ್ಞಾನದ ನಿಧಿಯಾಗಿದ್ದಾರೆ, ಮೋಕ್ಷದ ದಾರಿಯನ್ನು ತೋರುತ್ತಾರೆ ಎಂದು ಹೇಳಿದರು.

ರಾಯರ ಮೃತ್ತಿಕೆಗೆ ಮಹತ್ವವಿದೆ. ಮೃತ್ತಿಕಾ ವೃಂದಾವನದಲ್ಲಿ ಗುರುಗಳ ಸನ್ನಿಧಾನವಿರುತ್ತದೆ. ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಬೇಕು, ಅವರ ನಿರಂತರ ಸೇವೆಯಿಂದ ಎಲ್ಲರಿಗೂ ಶ್ರೇಯಸ್ಸಾಗಲಿ ಎಂದರು.

ವಿವಿಧ ಶ್ರೀಗಳಿಂದ ಪ್ರವಚನ

ಗೋಪಾಲ ದಾಸರ ಸುಳಾದಿ (ರಾಘವೇಂದ್ರ ಸ್ವಾಮಿಗಳ ಬಗ್ಗೆ) ಕುರಿತು ಪಂಡಿತ ಪವಮಾನಾಚಾರ್ಯ ಪಂಚಮುಖಿ, ‘ಶ್ರೀ ರಾಘವೇಂದ್ರ ವಿಜಯ-ಸನ್ಯಾಸ ವರ್ಣನೆ’ ಕುರಿತು ಬೆಂಗಳೂರಿನ ಪಂಡಿತ ಆಯನೂರು ಮಧುಸೂದನಾಚಾರ್ಯ, ‘ಮಹಾಭಾರತ ತಾತ್ಪರ್ಯ ನಿರ್ಣಯ’ ಕುರಿತು ಪಂಡಿತ ಪ್ರಾಣೇಶಾಚಾರ್ಯ ಕಡೂರು ಪ್ರವಚನ ನೀಡಿದರು.

ಸಂಜೆ ಪಂಡಿತ್ ಆನಂದ ಪಾಟೀಲ್ ಅವರಿಂದ ‘ದಾಸ ವಾರಿಧಿ’ ಸಂಗೀತ ಕಾರ್ಯಕ್ರಮ ನೆರವೇರಿತು. ಶಿರಸಿಯ ಪಂಡಿತ್ ಚಿನ್ಮಯ ಭಟ್ (ಹಾರ್ಮೋನಿಯಂ), ಧಾರವಾಡದ ಪಂಡಿತ್ ಪ್ರಸಾದ್ ಮಡಿವಾಳರ (ತಬಲಾ) ಸಾಥ್ ನೀಡಿದರು.