ಸಾರಾಂಶ
ವಲಸೆ ಹೋಗಿರುವ ಕಾರಣದಿಂದ 25,676 ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿದ್ದಾರೆ.
ಕಾರವಾರ: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.99.91ರಷ್ಟು ಸಾಧನೆ ಮಾಡಿದ್ದು, ಇದುವರೆಗೆ ₹1095.03 ಕೋಟಿಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.ಜಿಲ್ಲೆಯಲ್ಲಿ ಮಹಿಳೆಯನ್ನು ಕುಟುಂಬದ ಯಜಮಾನಿ ಎಂದು ನಮೂದಿಸಿರುವ 3,61,481 ಪಡಿತರ ಚೀಟಿಗಳಿದ್ದು, ಅವುಗಳಲ್ಲಿ ತೆರಿಗೆ ಪಾವತಿದಾರರು, ಮರಣ ಹೊಂದಿರುವವರು, ಯೋಜನೆ ನಿರಾಕರಿಸಿರುವವರು, ವಲಸೆ ಹೋಗಿರುವ ಕಾರಣದಿಂದ 25,676 ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿದ್ದಾರೆ.
ಅಂಕೋಲಾ ತಾಲೂಕಿನ ಫಲಾನುಭವಿಗಳಿಗೆ ಇದುವರೆಗೆ ₹88.02 ಕೋಟಿ, ಭಟ್ಕಳದಲ್ಲಿ ₹108.35 ಕೋಟಿ, ದಾಂಡೇಲಿಯಲ್ಲಿ ₹43.9 ಕೋಟಿ, ಹಳಿಯಾಳದಲ್ಲಿ ₹98.08 ಕೋಟಿ, ಹೊನ್ನಾವರದಲ್ಲಿ ₹131.67 ಕೋಟಿ, ಕಾರವಾರದಲ್ಲಿ ₹104.93 ಕೋಟಿ, ಕುಮಟಾದಲ್ಲಿ ₹124.15 ಕೋಟಿ, ಮುಂಡಗೋಡದಲ್ಲಿ ₹80.56 ಕೋಟಿ, ಸಿದ್ದಾಪುರದಲ್ಲಿ ₹77.83 ಕೋಟಿ, ಶಿರಸಿಯಲ್ಲಿ ₹135.72 ಕೋಟಿ, ಸೂಪಾದಲ್ಲಿ ₹40.27 ಕೋಟಿ, ಯಲ್ಲಾಪುರದಲ್ಲಿ ₹61.55 ಕೋಟಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ₹1095.03 ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.ಪ್ರತಿಯೊಬ್ಬ ಮಹಿಳೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಮತ್ತು ಅವರ ಅನೇಕ ಕಸನುಗಳನ್ನು ನನಸು ಮಾಡಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೆರವಾಗಿದೆ ಎನ್ನುತ್ತಾರೆ ಕೊಡಕಣಿ , ಕುಮಟಾ ಸುರೇಖಾ ವಾಲೇಕರ್.
ಸದ್ಯದಲ್ಲೇ ಜಿಲ್ಲೆಯ ಅರ್ಹ ಎಲ್ಲ ಫಲಾನುಭವಿಗಳಿಗೂ ಯೋಜನೆಯ ನೆರವು ಒದಗಿಸಿ ಅತ್ಯಂತ ಶೀಘ್ರದಲ್ಲಿ ಶೇ.100 ರಷ್ಟು ಗುರಿ ಸಾಧನೆ ಮಾಡಲಾಗುವುದು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್.