ಹತ್ತು ಹಲವು ವಿಷಯಗಳ ಚರ್ಚೆ, ಸಂವಾದದೊಂದಿಗೆ ಸೋಲಾಪುರದಲ್ಲಿ ಕಳೆದ ಎರಡು ದಿನಗಳಿಂದ ನಡೆದ 10ನೇ ಮಹಾಮೇಳಕ್ಕೆ ಭಾನುವಾರ ತರೆ ಬಿದ್ದಿತು.

ಸೋಲಾಪುರ (ಜಯದೇವಿ ತಾಯಿ ಲಿಗಾಡೆ ಮಹಾದ್ವಾರ)

ಬರೀ ಹೊರನಾಡು ಕನ್ನಡಿಗರ ಸುಖ-ದುಃಖ ಮಾತ್ರವಲ್ಲದೇ ಕನ್ನಡ -ಮರಾಠಿ ಬಾಂಧವ್ಯ, ಸೋಲಾಪೂರದ ಸಂಸ್ಕೃತಿ, ಸೊನ್ನಲಗಿ ಸಿದ್ಧರಾಮೇಶ್ವರು, ಕನ್ನಡಕ್ಕಾಗಿ ಜೀವನ ಸವೆಸಿದ ಜಯದೇವಿ ತಾಯಿ ಲಿಗಾಡೆ ಸೇರಿದಂತೆ ಹತ್ತು ಹಲವು ವಿಷಯಗಳ ಚರ್ಚೆ, ಸಂವಾದದೊಂದಿಗೆ ಸೋಲಾಪುರದಲ್ಲಿ ಕಳೆದ ಎರಡು ದಿನಗಳಿಂದ ನಡೆದ 10ನೇ ಮಹಾಮೇಳಕ್ಕೆ ಭಾನುವಾರ ತರೆ ಬಿದ್ದಿತು.

ಸಾನ್ನಿಧ್ಯ ವಹಿಸಿದ್ದ ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ, ಸೋಲಾಪುರ ಅನೇಕ ಭಾಷಿಕರಿಗೆ ಬರೀ ಸ್ಥಾನ ಮಾತ್ರವಲ್ಲದೇ, ಸಂಸ್ಕೃತಿ, ಸಮಾರಂಭಕ್ಕೆ ಅಡಚಣೆ ಇಲ್ಲದೇ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರು, ತೆಲಗು, ಮರಾಠಿ ಸೇರಿದಂತೆ ಅನೇಕ ಸಮಾಜದ ಜನರಿದ್ದಾರೆ. ಒಟ್ಟಾರೆ ಈ ಊರು ಭಾಷೆಗಳ ಸಂಗಮವಾಗಿದೆ. ಇದು ಔದ್ಯೋಗಿಕ ಕ್ಷೇತ್ರವಾಗಿದ್ದು, ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ ಜಿಲ್ಲೆಗಳಿಂದ ಈ ಊರಿಗೆ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದು, ಶೇ. 40ರಷ್ಟು ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ ಎಂದರು.

ಎಲ್ಲರಿಗೂ ಅವರವರ ಭಾಷೆ, ಪ್ರಾಂತ್ಯದ ಬಗ್ಗೆ ಗೌರವ, ಅಭಿಮಾನ ಇರಬೇಕು. ಆದರೆ, ಅತಿಯಾದ ಗೌರವ ಅಗತ್ಯವಿಲ್ಲ. ಮಾತೃ ಭಾಷೆಗೆ ಎತ್ತರ ಸ್ಥಾನ ಇಟ್ಟು ಬೇರೆ ಭಾಷೆಯನ್ನು ಗೌರವಿಸಬೇಕು.

ಭಾಷೆ, ಪ್ರಾಂತ ಎಂದು ನಾವ್ಯಾರು ಬಡಿದಾಡಿಕೊಳ್ಳುವ ಬದಲು ನಾವು ಭಾರತ ಮಾತೆ ಮಕ್ಕಳಾಗಿ ಅವರವರ ಭಾಷೆ, ಪ್ರಾಂತವನ್ನು ಅಭಿವೃದ್ಧಿ ಮಾಡಿಕೊಂಡು ಹೋಗಬೇಕು ಎಂದರು.

ಸಮಾರೋಪ ಭಾಷಣ ಮಾಡಿದ ಆಲೂರು ವೆಂಕಟರಾವ್‌ ಟ್ರಸ್ಟ್‌ ಅಧ್ಯಕ್ಷ ರಂಜಾನ್ ದರ್ಗಾ, ಎರಡು ದಿನಗಳ ಈ ಸಮ್ಮೇಳನದಲ್ಲಿ ಮನುಷ್ಯನ ಸಂಬಂಧಗಳು ಕೂಡುವಿಕೆಯ, ಒಂದಾಗುವ ತೀವ್ರತೆಯನ್ನು ಅನುಭಾವಿಸಿದನು. ಕನ್ನಡಿಗರು ಎಲ್ಲೆ ಇದ್ದರೂ ಅವರ ಒಂದಾಗಿರುವ ಆಸೆ, ಭಾವನೆಯನ್ನೂ ಯಾರೂ ಸೋಲಿಸಲು ಸಾಧ್ಯವಿಲ್ಲ. ಆದರೆ, ಹೊರನಾಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಮಾತ್ರ ತುಸು ಗಂಭೀರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.

ಮಹಾರಾಷ್ಟ್ರದ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಸೋಲಾಪುರ ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಸೋಲಾಪುರದಲ್ಲಿ ಕನ್ನಡ ಬೆಳೆಸಿ ಉಳಿಸಿಕೊಳ್ಳಲು ಸಾಕಷ್ಟು ಮಹಾನ್‌ ವ್ಯಕ್ತಿಗಳು ಕಾರ್ಯ ಮಾಡಿದ್ದಾರೆ. ಈ ಪೈಕಿ ಜಯದೇವಿ ತಾಯಿ ಲಿಗಾಡೆ ಹಾಗೂ ಮಲ್ಲಪ್ಪ ವಾಡದ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇಲ್ಲಿಯ ಸೊನ್ನಲಗಿ ಸಿದ್ದರಾಮೇಶ್ವರ ಆಶೀರ್ವಾದದಿಂದ ಸೋಲಾಪುರದಲ್ಲಿ ಹೆಚ್ಚು ಉತ್ತರ ಕರ್ನಾಟಕ ಛಾಯೆ ಇದ್ದು, ಕನ್ನಡಿಗರು ಹಾಗೂ ಮರಾಠಿಗರು ಬಾಂಧವ್ಯದಿಂದ ಜೀವಿಸುತ್ತಿದ್ದಾರೆ. ಇನ್ನು, ಈ ಭಾಗದಲ್ಲಿ ಹೆಚ್ಚು ಲಿಂಗಾಯತರು ಇದ್ದು ಹೆಚ್ಚಿನ ಕನ್ನಡ ಮಾತಾಡುವಂತಾಗಲಿ ಎಂದರು.

ಇದೇ ಸಂದರ್ಭದಲ್ಲಿ ಸೋಲಾಪುರದ ಉದ್ಯಮಿ ಪರಮಾನಂದ ಆಲಗೊಂಡ, ಹೋರಾಟಗಾರ ಎನ್.ಎ. ವಾಲೆ, ಜಾನಪದ ಕಲಾವಿದ ಗೈಬಿಶಾ ಮಕಾನದಾರ, ಡಿ.ಬಿ. ಹೆಬ್ಬಾಳ, ಕೆ.ಎನ್. ಹೂಗಾರ, ಅಕ್ಬರ್‌ ಮುಲ್ಲಾ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರ ಹಿರೇಮಠ, ಗುರು ಹಿರೇಮಠ ಹಾಗೂ ಇತರೆ ಪದಾಧಿಕಾರಿಗಳಿದ್ದರು.

ಗಡಿನಾಡು ಹೊರನಾಡು ಕನ್ನಡಿಗರ ಕರೆಯಿಸಿ ಸಮ್ಮೇಳನ ಮಾಡುತ್ತಿದ್ದು, ಬರುವ ದಿನಗಳಲ್ಲಿ ಹೊರ ದೇಶಗಳ ಕನ್ನಡಿಗರನ್ನು ಕರೆಯಿಸಿ ಸಮ್ಮೇಳನ ಮಾಡುವ ಮೂಲಕ ಜಗತ್ತಿನಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿದ್ಯಾವರ್ಧಕ ಸಂಘ ಚಿಂತನೆ ಮಾಡಲಿ ಎಂದು ಕಾಶೀ ಪೀಠದ

ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು. 10ನೇ ಮಹಾಮೇಳದಲ್ಲಿ ಆರು ಪ್ರಮುಖ ನಿರ್ಣಯ

ಸೋಲಾಪುರದಲ್ಲಿ ನಡೆದ ಎರಡು ದಿನಗಳ 10ನೇ ಮಹಾಮೇಳದಲ್ಲಿ ವಿದ್ಯಾವರ್ಧಕ ಸಂಘ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ ಮಂಡಿಸಿದರು.

1) ಹೊರನಾಡಿನಲ್ಲಿ ಕನ್ನಡ ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳನ್ನು ವರ್ಷದ ಆರಂಭದಲ್ಲಿಯೇ ಪೂರೈಸಲು ಆಯಾ ಸರ್ಕಾರಗಳಿಗೆ ಆಗ್ರಹಿಸುವುದು.2) ಹೊರನಾಡು ಎಂಬ ತಪ್ಪು ವ್ಯಾಖ್ಯಾನದಿಂದ ಹೊರನಾಡಿನಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಅವಕಾಶ ವಂಚಿತ ಆಗುವುದನ್ನು ತಪ್ಪಿಸಲು ಆ ವಾಖ್ಯಾನವನ್ನು ತಿದ್ದುಪಡಿ ಮಾಡುವುದು.

3) ಕರ್ನಾಟಕದ ಅಕಾಡೆಮಿ, ಪುರಸ್ಕಾರ, ಪ್ರಶಸ್ತಿಗಳಲ್ಲಿ ಸದಸ್ಯತ್ವ ನೀಡುವಲ್ಲಿ ಹೊರನಾಡ ಕನ್ನಡಿಗರನ್ನು ಪರಿಗಣಿಸಲು ಸರ್ಕಾರಕ್ಕೆ ಒತ್ತಾಯಿಸುವುದು.4) ಹೊರನಾಡ ಕನ್ನಡದ ಮಕ್ಕಳಿಗೆ ರಾಜ್ಯದಲ್ಲಿ ಉದ್ಯೋಗ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತೆ ಮಿತಿಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರಕ್ಕೆ ಆಗ್ರಹ

5) ಕನ್ನಡ, ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಶ್ರಮಿಸಿದ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಪ್ರತಿ ವರ್ಷ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು.6) ಹೊರನಾಡು ಮತ್ತು ಗಡಿನಾಡ ಕನ್ನಡಿಗರ ಅಹವಾಲುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಒಪ್ಪಿಸಬೇಕು.