ಮುಂಡರಗಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ ಹಾಗೂ ಅನ್ನದಾನೀಶ್ವರ ಸಂಸ್ಥಾನಮಠದ ಆಶ್ರಯದಲ್ಲಿ ಆ. 13ರಂದು ಬೆಳಗ್ಗೆ 9.30ಕ್ಕೆ ಲೇಖಕಿಯರ 10ನೇ ರಾಜ್ಯಮಟ್ಟದ ಸಮ್ಮೇಳನವನ್ನು ಸ್ಥಳೀಯ ಕ.ರಾ. ಬೆಲ್ಲದ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಕಚುಸಾಪ ಜಿಲ್ಲಾಧ್ಯಕ್ಷೆ ಶೋಭಾ ಮೇಟಿ, ಬೆಳಗ್ಗೆ 9.30ಕ್ಕೆ ಅನ್ನದಾನೀಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ 92ನೇ ಜನ್ಮದಿನಾಚರಣೆ ಪ್ರಯುಕ್ತ ಕಚುಸಾಪಕ್ಕೆ ₹1 ಲಕ್ಷ ದತ್ತಿನಿಧಿ ನೀಡಿದ್ದು, ದತ್ತಿನಿಧಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸುವರು.

ಹುಬ್ಬಳ್ಳಿಯ ಸಾಹಿತಿ ಸುಧಾ ಶೀಲವಂತರ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಸರ್ವಾಧ್ಯಕ್ಷೆ ಹನುಮಾಕ್ಷಿ ಗೋಗಿ ಉಪಸ್ಥಿತರಿರುವರು. ಈ ವೇಳೆ ಡಾ. ಅನ್ನದಾನೀಶ್ವರ ಸ್ವಾಮೀಜಿಯವರಿಗೆ ಚುಟುಕು ಭೂಷಣ, ಮಾಜಿ ಸಚಿವ ಎಸ್.ಎಸ್. ಪಾಟೀಲರಿಗೆ ಚುಟುಕು ದಾಸೋಹಿ ಮತ್ತು ವಿಜಯಕುಮಾರ ಬಣಕಾರಗೆ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮುಖ್ಯ ಅತಿಥಿಗಳಾಗಿ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರ, ಶಂಕರ ಕುಂಬಿ, ಡಾ. ಬಿ.ಜಿ. ಜವಳಿ, ಶೋಭಾ ಮೇಟಿ, ವಂದನಾ ರಮೇಶ ಭಾಗವಹಿಸುವರು. ತಾಲೂಕು ಅಧ್ಯಕ್ಷ ಸಿ.ಎಸ್. ಅರಸನಾಳ ಅಭಿನಂದನಾ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ಡಾ. ಶರಣಪ್ಪ ಕೊಟಗಿ ಅವರ ಪುಸ್ತಕ ಲೋಕಾರ್ಪಣೆಗೊಳ್ಳುವುದು.ಮಧ್ಯಾಹ್ನ 12.30ಕ್ಕೆ ಸಂಧ್ಯಾ ಕೃಷ್ಣ ದೀಕ್ಷಿತ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಜರುಗಲಿದೆ. ರೂಪಾ ನಾಟೇಕಾರ ವಚನ ಸಾಹಿತ್ಯದ ಪ್ರಸ್ತುತತೆ ಕುರಿತು, ವಿರುಪಮ ಹಿರೇಮಠ ಚುಟುಕು ಸಾಹಿತ್ಯಕ್ಕೆ ಮಹಿಳಾ ಕೊಡುಗೆ ಕುರಿತು, ಪದ್ಮಜಾ ಉಮರ್ಜಿ ಯುವ ಜನಾಂಗ ಮತ್ತು ಚುಟುಕು ಸಾಹಿತ್ಯ ಕುರಿತು ಮತ್ತು ವೀಣಾ ಪಾಟೀಲ ಶರಣರ ವಚನ ವಿಶ್ಲೇಷಣೆ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಚುಟುಕು ಕವಿಗೋಷ್ಠಿ ಜರುಗಲಿದೆ. ಡಾ. ರಾಜೇಂದ್ರ ಗಡಾದ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಅನೇಕ ಕವಿ- ಕವಯತ್ರಿಗಳು ಚುಟುಕು ವಾಚನ ಮಾಡುವರು. ಸಂಜೆ 4.30ಕ್ಕೆ ಸಮಾರೋಪ ಜರುಗಲಿದ್ದು, ಸಮ್ಮೇಳದ ಸರ್ವಧ್ಯಕ್ಷರಾದ ಸುಧಾ ಶೀಲವಂತರ ಸಮಾರೋಪ ನುಡಿಯನ್ನಾಡುವರು ಎಂದರು.


ಸುದ್ದಿಗೋಷ್ಠಿಯಲ್ಲಿ ಸಿ.ಎಸ್. ಅರಸನಾಳ, ಡಾ. ಸಚಿನ ಒಡೆಯರ್, ಸಂತೋಷಕುಮಾರ ಮುರಡಿ, ವಿಜಯಕುಮಾರ ಬಣಕಾರ ಉಪಸ್ಥಿತರಿದ್ದರು.