ಸಾರಾಂಶ
ದೇವಸ್ಥಾನದ 800 ವರ್ಷದ ಇತಿಹಾಸದಲ್ಲಿ ಜಾತ್ರೆಯಲ್ಲಿ ಇಷ್ಟೊಂದು ಭಕ್ತರು ಬಂದಿದ್ದು ಪ್ರಪ್ರಥಮ ಎನ್ನಲಾಗುತ್ತಿದೆ. ಈ ಹಿಂದೇ ನಡೆದ ಜಾತ್ರೆಗಳಲ್ಲಿ 4 ಲಕ್ಷ ಭಕ್ತರು ಬರುತ್ತಿದ್ದರು. ಇದೀಗ ಅದು ಮೂರು ಪಟ್ಟು ಹೆಚ್ಚಾಗಿದೆ.
ಮುನಿರಾಬಾದ್:
ಸಮಿಪದ ಪುಣ್ಯ ಕ್ಷೇತ್ರ ಹುಲಗಿಯ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಜಾತ್ರೆ ನಿಮಿತ್ತ ನಾಲ್ಕು ದಿನದಲ್ಲಿ 11 ಲಕ್ಷ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.ಮೇ 20ರಂದು ನಡೆದ ಲಘು ರಥೋತ್ಸವದಂದು 2 ಲಕ್ಷ, ಮೇ 21ರ ಮಹಾರಥೋತ್ಸವ ದಿನ 5 ಲಕ್ಷ, ಮೇ 22ರಂದು 2 ಲಕ್ಷ ಹಾಗೂ ಮೇ 23ರಂದು 2 ಲಕ್ಷ ಭಕ್ತರು ಅಮ್ಮನವರ ದರ್ಶನ ಭಾಗ್ಯ ಪಡೆದಿದ್ದಾರೆ. ಇದು ದೇವಸ್ಥಾನದ 800 ವರ್ಷದ ಇತಿಹಾಸದಲ್ಲಿ ಜಾತ್ರೆಯಲ್ಲಿ ಇಷ್ಟೊಂದು ಭಕ್ತರು ಬಂದಿದ್ದು ಪ್ರಪ್ರಥಮ ಎನ್ನಲಾಗುತ್ತಿದೆ.
ಈ ಹಿಂದೇ ನಡೆದ ಜಾತ್ರೆಗಳಲ್ಲಿ 4 ಲಕ್ಷ ಭಕ್ತರು ಬರುತ್ತಿದ್ದರು. ಇದೀಗ ಅದು ಮೂರು ಪಟ್ಟು ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮಹಾ ದಾಸೋಹ:
ದೇವಸ್ಥಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಜಾತ್ರೆ ನಿಮಿತ್ತ ಅಮ್ಮನ ದರ್ಶನಕ್ಕಾಗಿ ಬರುವ ಭಕ್ತರಿಗೆ ಅಮ್ಮನವರ ಮಹಾ ದಾಸೋಹ ಪ್ರಾರಂಭಿಸಿ ಪ್ರಸಾದ ನೀಡಲಾಯಿತು. ಅಮ್ಮನವರ ಮಹಾ ದಾಸೋಹ ಪ್ರಾರಂಭಿಸುವಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್ ಪ್ರಮುಖ ಪಾತ್ರ ವಹಿಸಿದ್ದರು. 2 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದ್ದು ಜೂನ್ 12ರ ವರೆಗೆ ದಾಸೋಹ ನಡೆಯಲಿದೆ.ಅಚ್ಚುಕಟ್ಟಾದ ವ್ಯವಸ್ಥೆ:
4 ದಿನ ನಡೆದ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಶುದ್ಧ ಕುಡಿಯುವ ನೀರು, ಶೌಚಾಲಯ, ಭಕ್ತರಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಲಾಯಿತು. ಹುಲಿಗಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ಭಕ್ತರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಯೋಜನೆ, ನೂತನ ಶೌಚಾಲಯ, ಕಾಂಪ್ಲೆಕ್ಸ್ ನಿರ್ಮಾಣ, 44 ಹೆಚ್ಚುವರಿ ಕೊಠಡಿ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಸೇರಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲಕರವಾಗಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.