ಡೆಂಘೀಗೆ ಸಂಕೇಶ್ವರದ 11 ವರ್ಷದ ಬಾಲಕಿ ಬಲಿ

| Published : Jul 12 2024, 01:32 AM IST

ಸಾರಾಂಶ

ಸಂಕೇಶ್ವರ: ಪಟ್ಟಣದ ಅನಂತವಿದ್ಯಾನಗರದ 11 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರ: ಪಟ್ಟಣದ ಅನಂತವಿದ್ಯಾನಗರದ 11 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.

ಪಟ್ಟಣದ ನಿವಾಸಿ ವಿದ್ಯಾ-ಕೃಷ್ಣಾ ದವಡತೆ ಎಂಬುವವರ ಪುತ್ರಿ ಶ್ರೇಯಾ (11) ದವಡತೆ ಮೃತ ಬಾಲಕಿ. ನಾಲ್ಕು ದಿನಗಳ ಹಿಂದೆ ತೀವ್ರ ಜ್ವರ ಹಾಗೂ ವಾಂತಿಯಿಂದ ಬಳಲುತ್ತಿದ್ದ ಶ್ರೇಯಾಳನ್ನು ಚಿಕಿತ್ಸೆಗಾಗಿ ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಘೀ ಜ್ವರ ಖಚಿತವಾದ ನಂತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೇಯಾ ಸಾವಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಬಾಲಕಿ ವಾಸಿಸುವ ವಾರ್ಡ್‌ ನಂ.18ರ ಅನಂತ ವಿದ್ಯಾನಗರದಲ್ಲಿ ಸ್ವಚ್ಛತೆಯ ಬಗ್ಗೆ ಹಲವು ಬಾರಿ ವಾರ್ಡ್‌ ಸದಸ್ಯ ಹಾಗೂ ಪುರಸಭೆಗೆ ತಿಳಿಸಿದರೂ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿಷಯ ತಿಳಿದು ಟಿಎಚ್‌ಒ ಡಾ.ಉದಯ ಕುಡಚಿ ಹಾಗೂ ಸಂಕೇಶ್ವರ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ದತ್ತಾತ್ರೇಯ ದೊಡಮನಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಮೃತ ಬಾಲಕಿ ಮನೆಗೆ ಭೇಟಿ ನೀಡಿದರು.

ಎಚ್ಚೆತ್ತ ಅಧಿಕಾರಿಗಳು:ಹುಕ್ಕೇರಿ ತಾಲೂಕಿನಲ್ಲಿ ಡೆಂಘೀ ಜ್ವರಕ್ಕೆ ಮೊದಲ ಬಲಿಯಾದ ನಂತರ ತಾಲೂಕು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಂಕೇಶ್ವರ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಹಾಗೂ ಜಾಗೃತಿ ಮೂಡಿಸುವಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.