ಅಪಘಾತದಲ್ಲಿ ಗಾಯಗೊಂಡು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ಅತಿ ವಿರಳವಾದ ಓ-ನೆಗೆಟಿವ್ ರಕ್ತವನ್ನು ದಾನ ಮಾಡುವ ಮೂಲಕ 112 ಪೊಲೀಸ್ ವಾಹನದ ಚಾಲಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಅಪಘಾತದಲ್ಲಿ ಗಾಯಗೊಂಡು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ಅತಿ ವಿರಳವಾದ ಓ-ನೆಗೆಟಿವ್ ರಕ್ತವನ್ನು ದಾನ ಮಾಡುವ ಮೂಲಕ 112 ಪೊಲೀಸ್ ವಾಹನದ ಚಾಲಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಕಾರವಾರದ 112 ಪೊಲೀಸ್ ವಾಹನದ ಚಾಲಕರಾಗಿರುವ ಕುಮಟಾ ತಾಲೂಕಿನ ಬಾಡಾ ಗ್ರಾಮದ ಅನಂತ ನಾರಾಯಣ ನಾಯ್ಕ ಅವರು ಅಪರೂಪದ ಓ-ನೆಗೆಟಿವ್ ರಕ್ತದಾನ ಮಾಡಿ ಯಲ್ಲಾಪುರದ ಮಂಜುನಾಥ ನಗರದ ನಿವಾಸಿ ಮಾರ್ಕೋಸ್ ಅವರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅಪಘಾತದಲ್ಲಿ ಕೈ ಮುರಿದು ಗಂಭೀರವಾಗಿ ಗಾಯಗೊಂಡಿದ್ದ ಮಾರ್ಕೋಸ್ ಅವರನ್ನು ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೆ ತುರ್ತಾಗಿ ಓ-ನೆಗೆಟಿವ್ ರಕ್ತದ ಅಗತ್ಯವಿದ್ದ ಹಿನ್ನೆಲೆ ಸಾಕಷ್ಟು ಹುಡುಕಾಟ ನಡೆಸಿದರೂ ಸೂಕ್ತ ರಕ್ತದಾನಿ ದೊರೆತಿರಲಿಲ್ಲ.

ಈ ಸಂದರ್ಭ ಕಾರವಾರದ ಬ್ಲಡ್ ಡೋನರ್ಸ್ ಕಾರವಾರ ವಾಟ್ಸಾಪ್ ಗುಂಪಿನ ವಿನಾಯಕ ನಾಯ್ಕ ಚೆಂಡಿಯಾ ಅವರನ್ನು ಸಂಪರ್ಕಿಸಲಾಯಿತು. ಮಾಹಿತಿ ಪಡೆದ ಅವರು ತಕ್ಷಣವೇ ಅನಂತ ನಾರಾಯಣ ನಾಯ್ಕ ಅವರನ್ನು ಸಂಪರ್ಕಿಸಿ ರಕ್ತದಾನದ ವ್ಯವಸ್ಥೆ ಮಾಡಿದರು.

ಮನವಿಗೆ ಸ್ಪಂದಿಸಿದ ಅನಂತ ನಾಯ್ಕ ಕೂಡಲೇ ಆಸ್ಪತ್ರೆಗೆ ತೆರಳಿ ಅತಿ ವಿರಳವಾದ ಓ-ನೆಗೆಟಿವ್ ರಕ್ತದಾನ ಮಾಡಿದರು. ಸಮಯಕ್ಕೆ ಸರಿಯಾಗಿ ರಕ್ತ ಲಭ್ಯವಾದ ಪರಿಣಾಮ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದ್ದು, ಮಾರ್ಕೋಸ್ ಅವರ ಜೀವ ಉಳಿಯಿತು.

ರಕ್ತದಾನ ಮಾಡಿದ ಅನಂತ ನಾಯ್ಕ ಹಾಗೂ ರಕ್ತದ ವ್ಯವಸ್ಥೆ ಕಲ್ಪಿಸಿದ ವಿನಾಯಕ ನಾಯ್ಕರ ಮಾನವೀಯ ಸೇವೆಗೆ ಗಾಯಾಳುವಿನ ತಾಯಿ ಪ್ರಮೀಳಾ ಕೃತಜ್ಞತೆ ಸಲ್ಲಿಸಿದ್ದಾರೆ.