ಮಾ.8ರ ಲೋಕ್‌ ಅದಾಲತ್‌ನಲ್ಲಿ 11366 ಪ್ರಕರಣ ಇತ್ಯರ್ಥ ಗುರಿ

| Published : Mar 06 2025, 12:31 AM IST

ಸಾರಾಂಶ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಾ.8ರಂದು ರಾಷ್ಟ್ರೀಯ ಲೋಕ್‌ ಅದಾಲತ್ ಆಯೋಜಿಸಲಾಗಿದೆ. ಅಲ್ಲದೇ, ರಾಜಿಯಾಗಬಲ್ಲ 11366 ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.

- : ನ್ಯಾ.ರಾಜೇಶ್ವರಿ ಎನ್.ಹೆಗಡೆ ಮಾಹಿತಿ । ಶೀಘ್ರ ನ್ಯಾಯದಾನಕ್ಕಾಗಿ ಜಿಲ್ಲೆ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಾ.8ರಂದು ರಾಷ್ಟ್ರೀಯ ಲೋಕ್‌ ಅದಾಲತ್ ಆಯೋಜಿಸಲಾಗಿದೆ. ಅಲ್ಲದೇ, ರಾಜಿಯಾಗಬಲ್ಲ 11366 ಪ್ರಕರಣಗಳ ಇತ್ಯರ್ಥದ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ್‌ ಅದಾಲತ್‌ನಲ್ಲಿ ಉಭಯ ಪಕ್ಷಗಾರರಿಗೆ ಶೀಘ್ರ ನ್ಯಾಯದಾನ ಮಾಡುವ ನಿಟ್ಟಿನಲ್ಲಿ ರಾಜಿಯಾಗಬಲ್ಲ ಪ್ರಕರಣಗಳಿಗೆ ಒತ್ತು ನೀಡಲಾಗಿದೆ. ಅತಿ ಹೆಚ್ಚು ಪ್ರಕರಣಗಳ ವಿಲೇವಾರಿ ಮಾಡಿ, ಜನರಿಗೆ ಅನುಕೂಲ ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯಗಳಲ್ಲಿ ಚಾಲ್ತಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ, ರಾಜಿಯಾಗಬಲ್ಲ ಎಲ್ಲ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಲು ಅವಕಾಶವಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ 41,965 ಪ್ರಕರಣ ಬಾಕಿ ಇದೆ. ಇದರಲ್ಲಿ ಶೇ.50ರಷ್ಟು ಪ್ರಕರಣ ಕ್ರಿಮಿನಲ್ ಸ್ವರೂಪದ್ದಾಗಿದೆ. ಬಾಕಿ ಪ್ರಕರಣಗಳಲ್ಲಿ ಬರುವ ಲೋಕ್‌ ಅದಾಲತ್‌ನಲ್ಲಿ 11,366 ರಾಜಿಯಾಗಬಲ್ಲ ಪ್ರಕರಣಗಳೆಂದು ಗುರುತಿಸಲಾಗಿದೆ. ಇದರಲ್ಲಿ 8ರಿಂದ 10 ಸಾವಿರ ಪ್ರಕರಣ ಇತ್ಯರ್ಥಪಡಿಸಲು ಉದ್ದೇಶಿಸಿದೆ. ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣ, ಭೂ ಸ್ವಾಧೀನ ಪರಿಹಾರ ಕೇಸ್, ಬ್ಯಾಂಕ್ ಸಾಲ ವಸೂಲಾತಿ ಕೇಸ್, ಎಂಎಂಡಿಆರ್‌ ಕಾಯ್ದೆಯಡಿ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕೌಟುಂಬಿಕ ನ್ಯಾಯಾಲಯದ ಪ್ರಕರಣ (ವಿಚ್ಛೇದನ ಹೊರತುಪಡಿಸಿ), ಪಿಂಚಣಿ ಪ್ರಕರಣ, ವೇತನ ಭತ್ಯೆಗೆ ಸಂಬಂಧಿಸಿದ ಕೇಸ್, ವಿದ್ಯುತ್‌, ನೀರಿನ ಶುಲ್ಕ, ಕೈಗಾರಿಕೆ, ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ರಾಜಿ ಬಗ್ಗೆ ಅನುಕೂಲವಾಗಲೆಂದು ರಾಜಿ ಪೂರ್ವ ಸಮಾಲೋಚನೆ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಮಾ.8ರ ರಾಷ್ಟ್ರೀಯ ಲೋಕ್ ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜನನ ಪ್ರಮಾಣ ಪತ್ರದಲ್ಲಿ ಹಲವು ದೋಷಗಳಿಂದ ಸುಮಾರು 2 ಸಾವಿರ ಪ್ರಕರಣ ಕೋರ್ಟ್‌ನಲ್ಲಿದ್ದವು. ಇವುಗಳನ್ನ ಆದ್ಯತೆ ಮೇಲೆ ಇತ್ಯರ್ಥಪಡಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕೇಸ್‌ ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿದ್ದ ಹಲವು ಪ್ರಕರಣ ಇತ್ಯರ್ಥಪಡಿಸಲಾಗಿದೆ. ಎಲ್ಲ ತಹಸೀಲ್ದಾರರ ಬಳಿ 200ಕ್ಕಿಂತ ಕಡಿಮೆ, ಉಪ ವಿಭಾಗಾಧಿಕಾರಿ ಬಳಿ 250ಕ್ಕಿಂತ ಕಡಿಮೆ ಮತ್ತು ಡಿಸಿ ಕಚೇರಿಯಲ್ಲಿ 50ಕ್ಕಿಂತ ಕಡಿಮೆ ಪ್ರಕರಣ ಇವೆ ಎಂದರು.

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಗಾಯಾಳು ಮತ್ತು ಮರಣ ಹೊಂದಿದವರಿಗೆ ಪರಿಹಾರ ನೀಡಲು ಅವಕಾಶ ಇದೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ಕಾರ್ಯರೂಪಕ್ಕೆ ತಂದು ಅಂತಹ ಪ್ರಕರಣಗಳಲ್ಲಿ ವಾರದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಎಂ.ನಿವೇದಿತಾ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಜಯಕುಮಾರ ಎಂ.ಸಂತೋಷ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ವಕೀಲರ ಸಂಘದ ಜಿ.ಕೆ.ಬಸವರಾಜ, ಗೋಪನಾಳು ಎಸ್.ಬಸವರಾಜ, ಎ.ಎಸ್.ಮಂಜುನಾಥ ಇತರರು ಇದ್ದರು.

- - -

ಕೋಟ್‌ ರಾಷ್ಟ್ರೀಯ ಲೋಕ್‌ ಅದಾಲತ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆ ನ್ಯಾಯಾಲಯ ಸಂಕೀರ್ಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ದೂ. 08192- 296364), ತಾಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ (08192-296885), ಹೊನ್ನಾಳಿ (08188-251732), ಚನ್ನಗಿರಿ (08189-2291952), ಜಗಳೂರು (08196-227600) ಇವರನ್ನು ಸಂಪರ್ಕಿಸ ಬಹುದು

- ರಾಜೇಶ್ವರಿ ಎನ್. ಹೆಗಡೆ, ನ್ಯಾಯಾಧೀಶೆ

- - - -5ಕೆಡಿವಿಜಿ2, 3:

ರಾಷ್ಟ್ರೀಯ ಲೋಕ್‌ ಅದಾಲತ್ ಆಯೋಜನೆ ಕುರಿತು ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿಸಿ ಗಂಗಾಧರ ಸ್ವಾಮಿ, ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಇತರರು ಇದ್ದರು.