ಸಾರಾಂಶ
ಬಯಲುಸೀಮೆಗಿಂತ ಮಲೆನಾಡಿನಲ್ಲಿ ಹೆಚ್ಚು ಪ್ರಕರಣ । ವಲಸೆ ಕಾರ್ಮಿಕರಲ್ಲೂ ನಡೆಯುತ್ತಿರುವ ಪ್ರಕರಣಗಳು
ಆರ್.ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ 2012ರಲ್ಲಿ ಕಠಿಣ ಕಾಯ್ದೆ ಜಾರಿಗೆ ಬಂದರೂ ಸಹ ಈ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿಲ್ಲ. ಈ ವರ್ಷದಲ್ಲಿ ಕಾಫಿ ನಾಡಿನಲ್ಲಿ 115 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಈ ಪ್ರಕರಣಗಳ ಸಂಖ್ಯೆ 111 ರಷ್ಟಿತ್ತು. ಅಂದರೆ ವರ್ಷದಿಂದ ವರ್ಷಕ್ಕೆ ಈ ಪ್ರಕರಣ ಹೆಚ್ಚಾಗುತ್ತಿದೆ.ಜಿಲ್ಲೆಯ 9 ತಾಲೂಕುಗಳ ಪೈಕಿ ಬಯಲುಸೀಮೆಯ ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೆ, ಮಲೆನಾಡಿನ ತಾಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ನಡೆಯುತ್ತಿವೆ. ಅದರಲ್ಲೂ ಕೂಲಿ ಕಾರ್ಮಿಕರು, ವಲಸೆ ತೋಟ ಕಾರ್ಮಿಕರ ವಸತಿ ಪ್ರದೇಶದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂಬುದು ಆತಂಕಕಾರಿ ವಿಷಯ.ಕೆಲವು ವರ್ಷಗಳಿಂದ ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದಿಂದ ಕೂಲಿ ಕೆಲಸಕ್ಕಾಗಿ ಕಾರ್ಮಿಕರು ಜಿಲ್ಲೆಗೆ ಆಗಮಿಸುವವರು ಕಾಫಿ ತೋಟಗಳಲ್ಲಿ ಮಾತ್ರ ಅಲ್ಲ, ಇತರೆ ಕ್ಷೇತ್ರದಲ್ಲೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಖ್ಯೆ ದಿನೇ ದಿನೇ ಹೆಚ್ಚಳ ವಾಗುತ್ತಿದೆ. ಸದ್ಯ ಸಾವಿರ ಸಂಖ್ಯೆಯನ್ನು ದಾಟಿ ಭಾರೀ ವೇಗದಲ್ಲಿ ಏರಿಕೆಯಾಗುತ್ತಿದೆ. ಕಾಫಿ ತೋಟದ ಲೈನ್‌ನಲ್ಲಿಯೇ ಕಾರ್ಮಿಕರು ವಾಸವಾಗಿದ್ದಾರೆ. ಅವರಲ್ಲಿ ಹೆಚ್ಚಿನ ಮಂದಿ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಅವರು ಗರ್ಭಿಣಿಯಾಗಿ ಆಸ್ಪತ್ರೆಗೆ ಪ್ರಸೂತಿ ಸಂದರ್ಭದಲ್ಲಿ ಬಂದಾಗ ಅವರ ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯವಾಗಿದ್ದರಿಂದ 18 ವರ್ಷಕ್ಕೂ ಮುನ್ನ ಮದುವೆಯಾಗಿರುವುದು ಗಮನಕ್ಕೆ ಬಂದಿದೆ.ಅಪ್ರಾಪ್ತ ಬಾಲಕಿಯರ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ:
ಪೋಕ್ಸೋ ಪ್ರಕರಣಗಳು ದಾಖಲಾಗಿರುವ ಒಟ್ಟಾರೆ ಸಂಖ್ಯೆಯಲ್ಲಿ 12 ರಿಂದ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವ ಸಂಖ್ಯೆಯೇ ಹೆಚ್ಚು. ಇವುಗಳಲ್ಲಿ ಸುಳ್ಳು ಪ್ರಕರಣಗಳ ಸಂಖ್ಯೆ ತೀರ ಕಡಿಮೆ. ಪ್ರಸಕ್ತ ಸಾಲಿನಲ್ಲಿ ನಡೆದಿರುವ 115 ಪ್ರಕರಣಗಳಲ್ಲಿ ಒಂದು ಮಾತ್ರ ಸುಳ್ಳೆಂದು ಖಚಿತವಾಗಿದೆ. ಈ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಅವರ ಚಲನವಲನಗಳು ಹಾಗೂ ಸ್ನೇಹಿತರ ಬಗ್ಗೆ ಎಚ್ಚರವಹಿಸಬೇಕು ಎಂದು ಮಕ್ಕಳ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಪೋಷಕರು, ಕೂಲಿ ಕೆಲಸಕ್ಕೆ ಹೋಗಿದ್ದಾಗ ಹೆಣ್ಣು ಮಕ್ಕಳು ಒಬ್ಬರೆ ಇದ್ದ ಸಂದರ್ಭದಲ್ಲಿ ಕೆಲವು ದೌರ್ಜನ್ಯ ಪ್ರಕರಣಗಳು ನಡೆದಿವೆ. ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕರೋಬ್ಬರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ವಿಚಾರಿಸಿ ಅದರ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕರಣ ದಾಖಲು ಮಾಡಿದೆ. ಅವರನ್ನು ಬಂಧಿಸಲಾಗಿದೆ.-- ಬಾಕ್ಸ್ --ವರ್ಷ-ಪ್ರಕರಣಗಳ ಸಂಖ್ಯೆ- ಇತ್ಯರ್ಥ - ವಿಚಾರಣೆ - ತನಿಖೆ -ವರ್ಗಾವಣೆ -ಶಿಕ್ಷೆ---------------------------------------------------------------------------------2023-24:111- 63 - 35 - 03 - 07 - 03---------------------------------------------------------------------------------2024-25:115 - 12 - 72 - 28 - 02 - 00------------------------------------------------------------------------------ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಉದ್ದೇಶದಿಂದ ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಬಗ್ಗೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಮಾಡ ಲಾಗುತ್ತಿದೆ. ಹೆಣ್ಣು ಮಕ್ಕಳೊಂದಿಗೆ ಪುರುಷರು ಲೈಂಗಿಕ ದೃಷ್ಟಿಯಿಂದ ಅಸಭ್ಯವಾಗಿ ವರ್ತಿಸಿದರೆ ಅಂತಹ ಮಕ್ಕಳು, ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಪ್ರತಿ ಯೊಂದು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣಗಳ ತನಿಖೆಗಾಗಿ ಓರ್ವ ತನಿಖಾಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ.
- ಪಿ. ಲೋಕೇಶ್ವರಪ್ಪಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ 27 ಕೆಸಿಕೆಎಂ 4