ಕಾಸರಗೋಡು ವಿದ್ಯುತ್‌ ಲೈನ್‌ಗಾಗಿ ಕರಾವಳಿಯ 1150 ಎಕರೆ ಜಮೀನು ಆಹುತಿ!

| Published : Nov 01 2024, 12:18 AM IST

ಕಾಸರಗೋಡು ವಿದ್ಯುತ್‌ ಲೈನ್‌ಗಾಗಿ ಕರಾವಳಿಯ 1150 ಎಕರೆ ಜಮೀನು ಆಹುತಿ!
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್ ಸಂಪರ್ಕ ಜಾಲಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬೇರೆ ರಾಜ್ಯಕ್ಕಾಗಿ ಮಾಡಲಾಗುತ್ತಿರುವ ಯೋಜನೆಗೆ ಈಗಾಗಲೇ ಅಭಿವೃದ್ಧಿಗೊಂಡಿರುವ ಕೃಷಿ ಪ್ರದೇಶಗಳನ್ನು ನಾಶಪಡಿಸುವುದನ್ನು ವಿರೋಧಿಸುತ್ತಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಉಡುಪಿ- ಕಾಸರಗೋಡು 400 ಕೆವಿ ಟ್ರಾನ್ಸ್‌ಮಿಷನ್ ಲೈನ್‌ಗಾಗಿ 1150 ಎಕರೆ ಸಮೃದ್ಧ ಜಮೀನು ಆಹುತಿಯಾಗಲಿದ್ದು, ಈ ಪ್ರದೇಶದ ರೈತರು ತಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಇದಕ್ಕಾಗಿ ಶೀಘ್ರದಲ್ಲೇ ಬೃಹತ್‌ ಜನ ಜಾಗೃತಿ ಪಾದಯಾತ್ರೆ, ರ್‍ಯಾಲಿ ನಡೆಸುವುದಾಗಿ ಯೋಜನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ಎಚ್ಚರಿಸಿದೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖ ಚಂದ್ರಹಾಸ ಶೆಟ್ಟಿ, ನಾಲ್ಕೂವರೆ ವರ್ಷ ಹಿಂದೆ ವಿಟ್ಲ ಭಾಗದ ರೈತರು ಮೊದಲ ಬಾರಿಗೆ ಈ ಯೋಜನೆಗೆ ಮೊದಲ ಬಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಉಭಯ ಜಿಲ್ಲೆಗಳ ರೈತ ಪರ ಸಂಘಟನೆಗಳು, ಪರಿಸರ ಪ್ರೇಮಿ ಹಾಗೂ ಸಾಮಾಜಿಕ ನ್ಯಾಯ ಪರ ಸಂಘಟನೆಗಳ ಪ್ರತಿನಿಧಿಗಳು ಸೇರಿಕೊಂಡು ಹೋರಾಟ ಸಮಿತಿಗಳ ಒಕ್ಕೂಟ ರಚಿಸಿ ಹೋರಾಟಕ್ಕಿಳಿದಿರುವುದಾಗಿ ಹೇಳಿದರು.

ವಿದ್ಯುತ್ ಸಂಪರ್ಕ ಜಾಲಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬೇರೆ ರಾಜ್ಯಕ್ಕಾಗಿ ಮಾಡಲಾಗುತ್ತಿರುವ ಯೋಜನೆಗೆ ಈಗಾಗಲೇ ಅಭಿವೃದ್ಧಿಗೊಂಡಿರುವ ಕೃಷಿ ಪ್ರದೇಶಗಳನ್ನು ನಾಶಪಡಿಸುವುದನ್ನು ವಿರೋಧಿಸುತ್ತಿದ್ದೇವೆ ಎಂದರು.

ಎಷ್ಟು ಆಹುತಿ?: ದ.ಕ., ಉಡುಪಿ ಜಿಲ್ಲೆಗಳ 1150 ಎಕರೆ ಭೂಪ್ರದೇಶ ಈ ಯೋಜನೆಗೆ ಆಹುತಿಯಾಗಲಿದೆ. ಯೋಜನೆ ಜಾರಿಯಾದರೆ ಸುಮಾರು 2300 ಎಕರೆಯಷ್ಟು ಜಮೀನು, ವಿವಿಧ ಕಟ್ಟಡ, ಮನೆ, ಶೆಡ್, ಗೋದಾಮು, ಹಟ್ಟಿ, ಮಠ ಮಂದಿರಗಳಲ್ಲಿ ವಾಸಿಸಲು ಕಷ್ಟಕರವಾಗಲಿದೆ. ಅಂದಾಜು 1,65,000ದಷ್ಟು ಅಡಕೆ ಮರಗಳು, 7800 ತೆಂಗಿನ ಮರ, 1,20,000 ಕರಿಮೆಣಸಿನ ಬಳ್ಳಿ, 4500 ರಬ್ಬರ್ ಮರಗಳು, 2500 ಹಲಸು, 5 ಸಾವಿರ ಸಾಗುವಾನಿ, 2800 ಮಾವು, 4500ರಷ್ಟು ಬಲಿತ ಕಾಡು ಮರಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಹಣ್ಣು ಹಂಪಲಿನ ಗಿಡಗಳು ಸರ್ವನಾಶ ಆಗಲಿವೆ ಎಂದು ಚಂದ್ರಹಾಸ ಶೆಟ್ಟಿ ಮಾಹಿತಿ ನೀಡಿದರು.

328 ಮನೆ, 16 ದೇವಸ್ಥಾನಕ್ಕೆ ಕುತ್ತು:

ಅಲ್ಲದೆ, 328 ಮನೆಗಳೂ, 26 ದೈವಸ್ಥಾನಗಳು, 8 ಮಸೀದಿ, 16 ದೇವಸ್ಥಾನ, 14 ಶಾಲೆಗಳು, 3 ಸೆಮಿನರಿಗಳು ಈ ಕಾರಿಡಾರ್‌ನ ಸಂಪರ್ಕಕ್ಕೆ ಬರಲಿವೆ ಎಂದು ಅವರು ವಿವರಿಸಿದರು.

ರೈತ ಮುಖಂಡ ಶ್ರೀಧರ ಶೆಟ್ಟಿ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಶೇ.1ರಷ್ಟಾದರೂ ಯೋಜನಾ ಸಂತ್ರಸ್ತರಿಗೆ ಕ್ರಮಬದ್ಧವಾಗಿ ನೋಟಿಸ್‌ ನೀಡಿಲ್ಲ. ಕಾರಿಡಾರ್‌ನಲ್ಲಿ ಬರುವ ಶೇ.70ರಷ್ಟು ಜನರಿಗೆ ಈ ಯೋಜನೆಯ ಅರಿವೇ ಇಲ್ಲ. ಯೋಜನೆ ಅನುಷ್ಠಾನವಾಗಬೇಕಾದರೆ ಶೇ. 85ರಷ್ಟು ಬಾಧಿತ ಕ್ಷೇತ್ರದ ಜನರ ಸಮ್ಮತಿ ಅಗತ್ಯ. ಆದರೆ ಇಲ್ಲಿ ಯೋಜನೆಗೆ ಶೇ.97ರಷ್ಟು ಜನರ ವಿರೋಧವಿದೆ. ಗ್ರಾ.ಪಂ.ಗಳ ವಿಶೇಷ ಗ್ರಾಮ ಸಭೆಗಳಲ್ಲಿಯೂ ಯೋಜನೆ ವಿರುದ್ಧ ಠರಾವು ಮಂಜೂರಾಗಿದೆ. ಈ ಕುರಿತು ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡದಿದ್ದರೆ ಅವರ ಕಚೇರಿ ಹಾಗೂ ನಿವಾಸಗಳ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರಮುಖರಾದ ರಾಜೀವ ಗೌಡ, ದಯಾನನಂದ ಶೆಟ್ಟಿ, ಉದಯ ಕುಮಾರ್, ಅಲೋನ್ಸ್ ಡಿಸೋಜ ಇದ್ದರು.