ಕೆಎಂಎಫ್‌ನಿಂದ ₹1152 ಕೋಟಿ ಪ್ರೋತ್ಸಾಧನ ಬಾಕಿ!

| Published : Jun 14 2024, 01:01 AM IST / Updated: Jun 14 2024, 01:02 AM IST

ಸಾರಾಂಶ

ಹೈನೋದ್ಯಮ ವೃದ್ಧಿಸಲು ಹಾಗೂ ರೈತರಿಗೆ ಸಹಾಯವಾಗಲಿ ಎಂದು ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಮೂಲಕ ಪ್ರತಿ ಲೀಟರ್ ಹಾಲಿಗೆ ₹5 ನಂತೆ ಕೊಡುತ್ತಿದ್ದ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕಳೆದ ಏಳೆಂಟು ತಿಂಗಳಿನಿಂದ ನೀಡಿಲ್ಲ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳು ಸೇರಿ ಎಂಟು ತಿಂಗಳ ₹1152 ಕೋಟಿ ಪ್ರೋತ್ಸಾಧನ ಬಾಕಿ ಇದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಹೈನೋದ್ಯಮ ವೃದ್ಧಿಸಲು ಹಾಗೂ ರೈತರಿಗೆ ಸಹಾಯವಾಗಲಿ ಎಂದು ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಮೂಲಕ ಪ್ರತಿ ಲೀಟರ್ ಹಾಲಿಗೆ ₹5 ನಂತೆ ಕೊಡುತ್ತಿದ್ದ ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಕಳೆದ ಏಳೆಂಟು ತಿಂಗಳಿನಿಂದ ನೀಡಿಲ್ಲ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳು ಸೇರಿ ಎಂಟು ತಿಂಗಳ ₹1152 ಕೋಟಿ ಪ್ರೋತ್ಸಾಧನ ಬಾಕಿ ಇದೆ. ಅಲ್ಲದೆ, ಒಬಿಸಿ ರೈತರಿಗೆ ಸೆಪ್ಟೆಂಬರ್ ತಿಂಗಳಿನಿಂದ ಪ್ರೋತ್ಸಾಹಧನ ಬಂದಿಲ್ಲ. ಎಸ್ಸಿ, ಎಸ್ಟಿ ರೈತರಿಗೆ ನವೆಂಬರ್‌ನಿಂದ ಬರಬೇಕಿದೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿಂದ ಪ್ರತಿನಿತ್ಯ 96 ಲಕ್ಷ ಲೀಟರ್‌ ಹಾಲು ಖರೀದಿ ಆಗುತ್ತದೆ. ಅದರಲ್ಲಿ 49 ಲಕ್ಷ ಲೀಟರ್‌ ಪ್ಯಾಕೆಟ್‌ ಆಗಿ ಮಾರಾಟಕ್ಕೆ ಬರುತ್ತಿದೆ. 10 ಲಕ್ಷ ಲೀಟರ್ ಮೊಸರಾಗಿ ಮಾರಾಟವಾಗುತ್ತದೆ. ಉಳಿದ ಹಾಲು ಉಪ ಉತ್ಪನ್ನ ಆಗುತ್ತದೆ. ತಿಂಗಳಿಗೆ ₹144 ಕೋಟಿ ಪ್ರೋತ್ಸಾಹಧನ ಬರಬೇಕು. ಅಂದರೆ ಎಂಟು ತಿಂಗಳು ಅಂದರೆ, ಇಲ್ಲಿಯವರೆಗೂ ₹1152 ಕೋಟಿ ಪ್ರೋತ್ಸಾಹಧನ ರೈತರ ಕೈಸೇರಬೇಕಿದೆ.

ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ₹27 ಕೋಟಿ ಪ್ರೋತ್ಸಾಹಧನ ಬರಬೇಕಾಗಿದೆ. ಪ್ರತಿನಿತ್ಯ 1 ಲಕ್ಷ 80 ಸಾವಿರ ಲೀಟರ್ ಹಾಲು ಬರುವುದರಿಂದ ಲೀಟರ್‌ಗೆ ₹5 ನಂತೆ ಲೆಕ್ಕದಲ್ಲಿ ಅದರ ಪ್ರೋತ್ಸಾಹಧನ ನಿತ್ಯ 9 ಲಕ್ಷ ಆಗಲಿದೆ. ತಿಂಗಳಿಗೆ ₹27 ಕೋಟಿ ಆಗಲಿದೆ. ಇನ್ನು ರಾಜ್ಯಾದ್ಯಂತ ನೂರಾರು ಕೋಟಿ ಹಣ ಸರ್ಕಾರದಿಂದ ಬರುವುದು ಬಾಕಿ ಇದೆ.

ಬಾಕಿ ಉಳಿಸಿಕೊಂಡ ಸರ್ಕಾರ:

ರೈತರು ಹಸು ಹಾಗೂ ಎಮ್ಮೆಗಳನ್ನು ಸಾಕಿಕೊಂಡು ಜೀವನ ನಡೆಸಲು ಹಾಲು ಉತ್ಪಾದಕರ ಒಕ್ಕೂಟ ಸಹಕಾರಿಯಾಗಿದೆ. ಪ್ರತಿ ಹಳ್ಳಿಗಳಲ್ಲಿನ ರೈತರು ತಮ್ಮ ಭಾಗದಲ್ಲಿರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ತಂದು ಹಾಕುತ್ತಾರೆ. ಈ ವೇಳೆ ತಿಂಗಳಿಗೊಮ್ಮೆ ಸಂಘದಿಂದಲೇ ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗುತ್ತದೆ. ಆದರೆ ಕಳೆದ ಎಂಟು ತಿಂಗಳಿನಿಂದ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ ₹5 ಅಂತೆ ಬರಬೇಕಿದ್ದ ಪ್ರೋತ್ಸಾಹಧನ ರೈತರಿಗೆ ಬಾರದೇ ಬಾಕಿ ಉಳಿದಿದೆ.

ಬರಗಾಲದಲ್ಲಿ ಪರದಾಡಿದ ರೈತರು:

ಕಳೆದ ಬಾರಿ ಆವರಿಸಿದ ಭೀಕರ ಬರಗಾಲದಲ್ಲಿ ಜಾನುವಾರುಗಳ ಸಾಕಾಣಿಕೆಗೆ ಹಸಿ ಮೇವು ಸಿಗದೆ ರೈತರು, ಹೈನುಗಾರರು ಪರದಾಡಿದ್ದಾರೆ. ಈ ಸಂದರ್ಭದಲ್ಲೂ ಪ್ರೋತ್ಸಾಹಧನ ಬಿಡುಗಡೆ ಆಗದ ಹಿನ್ನೆಲೆ ಎಲ್ಲವನ್ನೂ ಕೈಯಿಂದಲೇ ಹಾಕಿ ನಷ್ಟ ಅನುಭವಿಸುತ್ತಿದ್ದಾರೆ ರೈತರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಈ ಮೊದಲು ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ ₹43 ಇತ್ತು. ಅದರ ಮೇಲೆ ವಿಮುಲ್‌ನಿಂದ ₹2 ಇಳಿಕೆ ಮಾಡಲಾಗಿದೆ. ಜೊತೆಗೆ ಆಕಳು ಹಾಲಿಗೆ ₹32.20ಪೈಸೆ ಇತ್ತು ಅದರಲ್ಲೂ ₹1 ಕಡಿಮೆ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಹಾಲಿನ ಪೌಡರ್‌ ಬೆಲೆ ಇಳಿಕೆ:

ಹಾಲು ಉತ್ಪಾದಕರಿಂದ ವಿಜಯಪುರ-ಬಾಗಲಕೋಟೆ ಸೇರಿ ನಿತ್ಯ 1 ಲಕ್ಷ 80ಸಾವಿರ ಲೀಟರ್ ಹಾಲು ವಿಮುಲ್‌ಗೆ ಬರುತ್ತಿದೆ. ಅದರಲ್ಲಿ ಕೇವಲ 95ಸಾವಿರ ಲೀಟರ್ ಹಾಲು ಮಾತ್ರ ಮಾರಾಟ ಆಗುತ್ತಿರುವುದರಿಂದ ವಿಮುಲ್‌ಗೆ ಹೊಡೆತ ಬಿದ್ದಿದೆ. ಉಳಿದ ಹಾಲಿನಿಂದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆದರೆ ಮೊದಲಿಗೆ ಪ್ರತಿ ಕೆಜಿಗೆ ₹320 ಇದ್ದ ಹಾಲಿನ ಪೌಡರ್ ಇದೀಗ 220ಕ್ಕೆ ಕುಸಿದಿದ್ದು, ಇದು ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ.

ಹಾಲಿನ ಗುಣಮಟ್ಟ ಪರೀಕ್ಷೆ ವಿಧಾನ:

ರೈತರು ಹಾಲನ್ನು ತಂದು ಸಮೀಪದ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ತಂದು ಹಾಕುತ್ತಾರೆ. ಈ ವೇಳೆ ಅಲ್ಲಿ ಹಾಲಿನಲ್ಲಿರುವ ಬೆಣ್ಣೆ, ತುಪ್ಪ ಸೇರಿದಂತೆ ಕೊಬ್ಬಿನ ಅಂಶ ಎಷ್ಟಿದೆ ಎಂಬುವುದನ್ನು ಯಂತ್ರದ ಮೂಲಕ ತಪಾಸಣೆ ಮಾಡಲಾಗುತ್ತದೆ. ಹಸುವಿನ ಹಾಲಿಗೆ ಕ್ವಾಲಿಟಿ ತಪಾಸಣೆ ಮಾಡಲು ಎಸ್‌ಎನ್ಎಫ್ (ನಾನ್‌ ಸಾಲಿಡ್ ಫ್ಯಾಟ್) ವಿಧಾನ ಬಳಸಿದಾಗ 8ರಷ್ಟು ಬರಬೇಕು. ಜೊತೆಗೆ ಫ್ಯಾಟ್ 3.5ನಷ್ಟು ಇರಬೇಕು ಎಂಬ ನಿಯಮವಿದೆ.

----

ಬಾಕ್ಸ್‌....

ಸದ್ಯದ ಹಾಲಿನ ದರ

ಆಕಳು ಹಾಲಿನ ಗುಣಮಟ್ಟದ ಆಧಾರದ ಮೇಲೆ ಡೈರಿಗೆ ಹಾಕುವ ಪ್ರತಿ ಲೀಟರ್ ಹಾಲಿಗೆ ₹25 ಯಿಂದ ₹28ವರೆಗೆ ರೈತರಿಗೆ ಸಿಗುತ್ತಿದೆ. ಸರ್ಕಾರದಿಂದ ₹5 ಪ್ರೋತ್ಸಾಹಧನ ಬಿಡುಗಡೆ ಆದಲ್ಲಿ ಅದರ ಬೆಲೆ ಪ್ರತಿ ಲೀ.ಗೆ ₹33 ಆಗಲಿದೆ. ಇನ್ನು ಎಮ್ಮೆಯ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ₹37ಯಿಂದ ₹41ವರೆಗೆ ದರ ಸಿಗಲಿದೆ. ಇದರ ಜೊತೆಗೆ ಸರ್ಕಾರದ ಬಾಕಿ ಉಳಿದಿರುವ ₹5 ಪ್ರೋತ್ಸಾಹಧನ ಬಿಡುಗಡೆ ಆದಲ್ಲಿ ₹46 ಪ್ರತಿ ಲೀಟರ್ ಹಾಲಿಗೆ ಸಿಕ್ಕಂತಾಗುತ್ತದೆ.

----

ಕೋಟ್

ನಮ್ಮಲ್ಲಿ 10 ಆಕಳು, 4 ಎಮ್ಮೆಗಳು ಇದ್ದು, ದಿನಕ್ಕೆ 100 ಲೀಟರ್ ಹಾಲನ್ನು ಹಾಲಿನ ಡೈರಿಗಳಿಗೆ ಹಾಕುತ್ತಿದ್ದೇವೆ. ಕಳೆದ ಏಳೆಂಟು ತಿಂಗಳಿನಿಂದ ಪ್ರತಿ ಲೀಟರ್ ಹಾಲಿಗೆ ₹5 ಅಂತೆ ಸರ್ಕಾರದಿಂದ ಬರಬೇಕಿರುವ ಪ್ರೋತ್ಸಾಹಧನ ಬಂದಿಲ್ಲ. ಅದಲ್ಲದೇ ಕೆಎಂಎಫ್, ವಿಮುಲ್‌ಜಿಂದಲೂ ಪದೆ ಪದೇ ದರ ಇಳಿಸುತ್ತಿದ್ದು, ನಮಗೆ ನಷ್ಟವಾಗುತ್ತಿದೆ. ನಮ್ಮಲ್ಲೂ ಸಹ ಮಹಾರಾಷ್ಟ್ರದಲ್ಲಿ ಇರುವಂತೆ ಖಾಸಗಿ ಹಾಲಿನ ಡೈರಿಗಳು ಬಂದಾಗ ಮಾತ್ರ ರೈತರಿಗೆ ಅನುಕೂಲ ಆಗಲಿದೆ.

-ದತ್ತು ಬನ್ನೇನವರ, ತಿಗಣಿಬಿದರಿ ರೈತ.

---

ಒಬಿಸಿ ರೈತರಿಗೆ ಸೆಪ್ಟೆಂಬರ್ ತಿಂಗಳಿನಿಂದ ಪ್ರೋತ್ಸಾಹಧನ ಬಂದಿಲ್ಲ. ಎಸ್ಸಿ, ಎಸ್ಟಿ ರೈತರಿಗೆ ನವ್ಹೆಂಬರ್‌ನಿಂದ ಬರಬೇಕಿದೆ. ಇಂದು ಅಥವಾ ನಾಳೆ ಮಾರ್ಚ್ ತಿಂಗಳಿನದ್ದು ಪ್ರೋತ್ಸಾಹಧನ ಬರಲಿದೆ. ಎಲ್ಲ ರೈತರಿಗೂ ಸಹ ಬಾಕಿ ಉಳಿದಿರುವ ಪ್ರೋತ್ಸಾಹಧನ ಕೊಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದ್ದು, ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ.

-ಶಿವಶಂಕರಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರು. ವಿಮುಲ್.

---