ಡಾ. ಶ್ರೀ ಸಿದ್ಧಗಂಗಾ ಶಿವಕುಮಾರ ಶ್ರೀಗಳ 118ನೇ ಜಯಂತ್ಯುತ್ಸವ

| Published : Apr 02 2025, 01:03 AM IST

ಸಾರಾಂಶ

ಡಾ. ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಕಳೆದ ವರ್ಷದಂತೆ ಈ ಬಾರಿಯೂ ಉತ್ತಮ ಮಳೆಯಾಗಿ ಜನ ಜೀವನ ಸುರಕ್ಷಿತವಾಗಲಿ. ಉತ್ತಮವಾದ ಬೆಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತ್ರಿವಿಧ ದಾಸೋಹಿ ಡಾ. ಶ್ರೀ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮೀಜಿಗಳ 118ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದಿಸಿ ಗೌರವಿಸಲಾಯಿತು.

ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬ್ಯಾಂಕ್ ಆಫ್ ಬರೋಡ ಶಾಖೆ ಎದುರು ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ತ್ರಿವಿಧ ದಾಸೋಹಿ ಡಾ.ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿಗಳ ಭಾವಚಿತ್ರ ಇರಿಸಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜೆಗೆ ಬಂದ ಭಕ್ತರು ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ನಂತರ ಶಂಕರ್ ಬಾಬು ಮಾತನಾಡಿ, ರಾಜ್ಯ ಮತ್ತು ದೇಶ ಕಂಡ ಶ್ರೇಷ್ಠರು, ತ್ರಿವಿಧ ದಾಸೋಹಿ, ಡಾ. ಶಿವಕುಮಾರ್ ಸ್ವಾಮೀಜಿಗಳು ಎಂದೆಂದಿಗೂ ಅಮರರಾಗಿದ್ದಾರೆ. ಪ್ರಸ್ತುತ ಅವರು ನಮ್ಮ ಜೊತೆಯಲ್ಲಿಲ್ಲದಿದ್ದರೂ ಅವರ ಸಾಮಾಜಿಕ ಕಳಕಳಿಯುಳ್ಳ ಸೇವೆ ನಮ್ಮ ಮುಂದಿದೆ ಎಂದರು.

ಡಾ. ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದಿಂದ ಕಳೆದ ವರ್ಷದಂತೆ ಈ ಬಾರಿಯೂ ಉತ್ತಮ ಮಳೆಯಾಗಿ ಜನ ಜೀವನ ಸುರಕ್ಷಿತವಾಗಲಿ. ಉತ್ತಮವಾದ ಬೆಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಪ್ರಾರ್ಥಿಸಿದರು.

ಬಾಬುರಾಯನ ಕೊಪ್ಪಲು ಗ್ರಾಪಂ ಪಿಡಿಒ ಪ್ರಶಾಂತ್ ಬಾಬು ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಅಕ್ಷರ, ಆಶ್ರಯ ಹಾಗೂ ಅನ್ನದಾನ ನೀಡಿದವರು. ಅವರ ಆದರ್ಶವನ್ನು ಎಲ್ಲರೂ ಪಾಲಿಸುವಂತಾಲಿ ಎಂದರು.

ಮಂಡ್ಯ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಬಳ್ಳೆಕೆರೆ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ರಾಜ್ಯ ಸಂಚಾಲಕ ಕಾರ್ಯದರ್ಶಿ ಜಗದೀಶ್ ಗೌಡ, ದೇವರಹಳ್ಳಿ ಚಂದ್ರು, ವೀಣಾ ಬಾಯಿ, ರೈತ ಮುಖಂಡ ಬಿ.ಎಸ್ ರಮೇಶ್, ಹರೀಶ್, ಸಾಗರ್ ಬೆಟ್ಟೇಗೌಡ, ರಾಘವೇಂದ್ರ, ಪ್ರಜ್ವಲ್, ದಿಲೀಪ್ ಕುಮಾರ್, ಎನ್.ಜೆ. ಶ್ರೀನಿವಾಸ್, ಅರ್ಚಕ ವೀರಪ್ಪ, ಪವರ್ ಮ್ಯಾನ್ ಶ್ರೀಧರ್, ಬಿ.ರೇಖಾ ಸೇರಿದಂತೆ ಇತರ ಆಟೋ ಸಂಘದ ಸದಸ್ಯರು ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರದ 20ಕ್ಕೂ ಹೆಚ್ಚು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.