ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಮಠದಲ್ಲಿಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಫೋಟೋ 5...ಶ್ರೀ ಮಠದಲ್ಲಿ ಪುತ್ಥಳಿ ಮೆರವಣಿಗೆ ನೆರವೇರಿಸಲಾಯಿತುಫೋಟೋ 6.. ಲಿಂಗೈಕ್ಯ ಶ್ರೀಗಳ ಗದ್ದುಗೆ ಪೂಜೆ ನೆರವೇರಿಸಿದ ಸಿದ್ಧಲಿಂಗ ಸ್ವಾಮೀಜಿ
---- ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಫಲಪುಷ್ಪಾಲಂಕಾರ । ಲಕ್ಷಾಂತರ ಭಕ್ತರಿಂದ ದರ್ಶನ
- ಸ್ವಾಮೀಜಿಗಳಿಗೆ ವಿಶೇಷ ಪೂಜೆ ಸಲ್ಲಿಕೆ । ಭಕ್ತರಿಗೆ ಮೂರು ಹೊತ್ತು ಪ್ರಸಾದ ವಿನಿಯೋಗ---ಕನ್ನಡಪ್ರಭ ವಾರ್ತೆ ತುಮಕೂರುತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಮಠದಲ್ಲಿಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಡಾ.ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿಗೆ ವಿವಿಧ ಮಠಾಧೀಶರು, ಹರಗುರುಚರ ಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತಗಣ ಸಾಕ್ಷಿಯಾದರು.
ನಾಡಿನ ಭಕ್ತಾದಿಗಳ ಮನ-ಮನೆಗಳ ದೈವೀಕ ಪ್ರಭೆಯಾಗಿದ್ದ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರವನ್ನು ಬಗೆ ಬಗೆಯ ಪುಷ್ಪಗಳಿಂದ ಸಿಂಗಾರಗೊಳಿಸಲಾಗಿತ್ತು.ಶ್ರೀಗಳ ಗದ್ದುಗೆಯನ್ನು ಸಹ ಹೂವು, ಹಣ್ಣುಗಳಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು.ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಎಂದಿನಂತೆ ನಸುಕಿನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿ ಪರಮ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಯವರು ವಿವಿಧ ಬಗೆಯ ಹಣ್ಣುಗಳು, ಪುಷ್ಪಗಳಿಂದ ಅಲಂಕರಿಸಿದ್ದ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಪುತ್ಥಳಿ ಮೆರವಣಿಗೆ:ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.ಮೆರವಣಿಗೆಯುದ್ಧಕ್ಕೂ ನಂದಿಧ್ವಜ ಕುಣಿತ, ಕರಡಿ ವಾದ್ಯ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.ಶ್ರೀಮಠದ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ 119 ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು, ಹರಗುರುಚರಮೂರ್ತಿಗಳು, ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಭಕ್ತಾದಿಗಳು, ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಶ್ರೀ ಕ್ಷೇತ್ರದಲ್ಲಿ ಎಂದಿನಂತೆ ಶ್ರೀಗಳ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ೬ ಕಡೆ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕ್ಷೇತ್ರದ ೬ ಕಡೆ ಮಹಾಪ್ರಸಾದದ ವಿನಿಯೋಗ ನಡೆಯುತ್ತಿದ್ದು, ಮಧ್ಯಾಹ್ನ ಊಟಕ್ಕೆ ಸಿಹಿ ಬೂಂದಿ, ಖಾರ ಬೂಂದಿ, ಚಿತ್ರಾನ್ನ, ಪಲ್ಯ, ಕೋಸಂಬರಿ, ಅನ್ನ ಸಾಂಬರು, ಪಾಯಸ, ಮಜ್ಜಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು.ಇನ್ನು ರಾತ್ರಿ ಊಟಕ್ಕೂ ಸಹ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ನಾಡಿನಾದ್ಯಂತ ಆಗಮಿಸಿದ್ದ ಭಕ್ತಾದಿಗಳು ಶ್ರೀಕ್ಷೇತ್ರದ ಪ್ರಸಾದವನ್ನು ಸೇವಿಸಿ ಪುನೀತರಾದರು.