ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದವರು ವಾಸಿಸುತ್ತಿರುವ ವಿವಿಧ ಗ್ರಾಮಗಳ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತಾವು ಸುಮಾರು 12.50 ಕೋಟಿಯಷ್ಟು ಅನುದಾನವನ್ನು ನೀಡಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನ ಆವರಣದಲ್ಲಿ ನೊಳಂಬ ಲಿಂಗಾಯಿತ ಉಪ ಸಮಿತಿ ವತಿಯಿಂದ ಹಾಗೂ ಶಾಸಕ ಅನುದಾನ ಸುಮಾರು 35 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಗಣಪತಿ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾವು ಎಂದೂ ಭೇದಭಾವ ಮಾಡಿಲ್ಲ. ಶಾಸಕರಾದ ಮೇಲೆ ಎಲ್ಲರಿಗೂ ಶಾಸಕನೇ. ನಾನು ಜಾತಿ ಆಧರಿಸಿ ರಾಜಕಾರಣ ಮಾಡಲ್ಲ. ಹಾಗಾಗಿಯೇ ಜನರು ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ನನ್ನ ದೃಷ್ಠಿಯಲ್ಲಿ ಎಲ್ಲ ಸಮುದಾಯದವರೂ ಸಮಾನರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ದಂಡಿನಶಿವರ ರಸ್ತೆಯ ಸಾರಿಗೆಹಳ್ಳಿ ಕೆರೆಕೋಡಿಗೆ ಸೇತುವೆ ನಿರ್ಮಿಸಲು ಸುಮಾರು 4.50 ಕೋಟಿ ರು. ಅನುದಾನ ನೀಡಲಾಗಿದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.ರಾಜ್ಯ ನೊಳಂಬ ಲಿಂಗಾಯತ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ತಮಗೆ ಬಂದಿರುವ ಅನುದಾನವನ್ನು ಪ್ರಾಮಾಣಿಕವಾಗಿ ಹಂಚಿದ್ದಾರೆ. ಅವರು ಜಿಲ್ಲಾ ರೈತರ ಹಿತಕ್ಕಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಎದುರು ಹಾಕಿಕೊಂಡು ಲಿಂಕ್ ಕೆನಾಲ್ ವಿರುದ್ಧ ಸಿಡಿದೆದ್ದಿದ್ದಾರೆ. ಎಲ್ಲರೂ ಕೈ ಜೋಡಿಸಿದರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ರಾಜ್ಯ ನೊಳಂಬ ಲಿಂಗಾಯತ ಸಂಘದ ಗೌರವ ಕಾರ್ಯದರ್ಶಿ ಶಶಿಧರ್ ಮಾತನಾಡಿ, ತಮ್ಮ ಸಮುದಾಯದ ಸುಮಾರು 1100 ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ. ಎಲ್ಲಕ್ಕೂ ನಾವು ಸರ್ಕಾರವನ್ನು ಕೇಳಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳು ಕೈ ಜೋಡಿಸಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು. ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಂ.ಬಿ.ಧರಣೇಶ್ ಹಾಗೂ ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಮಾಚೇನಹಳ್ಳಿ ಲೋಕೇಶ್ ರನ್ನು ಅಭಿನಂದಿಸಲಾಯಿತು.
ತಾಲೂಕು ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೆಶಕರಾದ ಎಂ.ದೇವರಾಜು, ಕಾರ್ಯದರ್ಶಿ ಶಿವಕುಮಾರ್, ಶೈಲೇಶ್, ತಾಂತ್ರಿಕ ಸಲಹೆಗಾರರು ಎಂ.ಎನ್.ಪ್ರಸಾದ್, ಮುಖಂಡರಾದ ಹಟ್ಟಿಹಳ್ಳಿ ರಮೇಶ್, ಮಾಚೇನಹಳ್ಳಿ ಸಿದ್ದಬಸಪ್ಪ, ಹೆಡಗಿಹಳ್ಳಿ ವಿಶ್ವನಾಥ್, ರಾಮಡಿಹಳ್ಳಿ ದೇವರಾಜು, ವೆಂಕಟಾಪುರ ಯೋಗೀಶ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.