ಅಧ್ಯಾತ್ಮ, ಧಾರ್ಮಿಕ ಹಾಗೂ ಪುಣ್ಯಸ್ಮರಣೆ ಮತ್ತು ಜಾತ್ರಾ ಮಹೋತ್ಸವಗಳ ವೇದಿಕೆಗಳಲ್ಲಿ ಶ್ರೀಮಂತರು ತಮ್ಮ ಮಕ್ಕಳ ಮದುವೆ ಮಾಡಿಕೊಳ್ಳುವುದಿಲ್ಲ.

ಹಗರಿಬೊಮ್ಮನಹಳ್ಳಿ: ಸತಿ- ಪತಿಗಳಲ್ಲಿ ಪರಸ್ಪರ ಪ್ರೀತಿಯ ಸಾಮರಸ್ಯವಿರಬೇಕು. ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಸುವ ಔದಾರ್ಯ ರೂಢಿಸಿಕೊಂಡು ಸುಖೀ ದಾಂಪತ್ಯ ಜೀವನ ನಡೆಸಿರಿ ಎಂದು ಶಾಸಕ ಕೃಷ್ಣ ನಾಯ್ಕ ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಏಣಿಗಿ ಗ್ರಾಮದಲ್ಲಿ ರುದ್ರೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಬಸವೇಶ್ವರ ದೇಗುಲದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧ್ಯಾತ್ಮ, ಧಾರ್ಮಿಕ ಹಾಗೂ ಪುಣ್ಯಸ್ಮರಣೆ ಮತ್ತು ಜಾತ್ರಾ ಮಹೋತ್ಸವಗಳ ವೇದಿಕೆಗಳಲ್ಲಿ ಶ್ರೀಮಂತರು ತಮ್ಮ ಮಕ್ಕಳ ಮದುವೆ ಮಾಡಿಕೊಳ್ಳುವುದಿಲ್ಲ. ಇಂತಹ ವೇದಿಕೆಗಳಲ್ಲಿ ನಡೆಯುವ ವಿವಾಹಗಳು ಬಡವರದಲ್ಲ, ಭಾಗ್ಯ ಮತ್ತು ಪುಣ್ಯವಂತರ ಮದುವೆಯಾಗಿದೆ ಎಂದು ಪ್ರತಿಪಾದಿಸಿದರು.

ಸಾನಿಧ್ಯ ವಹಿಸಿದ್ದ ಹಂಪಸಾಗರ ನವಲಿ ಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ ಮಾತನಾಡಿ, ದಾನ ಧರ್ಮ ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯಾರಿಗೂ ಮನ ನೋಯಿಸದೇ ಸಹಬಾಳ್ವೆಯ ಮೂಲಕ ಸುಂದರ ಬದುಕಿಗೆ ಮುನ್ನುಡಿ ಬರೆಯಬೇಕು. ಗೃಹಸ್ಥಾಶ್ರಮ ಧರ್ಮ ಕೂಡ ಬಹು ದೊಡ್ಡ ಜವಬ್ದಾರಿಯನ್ನು ಹೊಂದಿರುತ್ತೆ. ದೇಶಕ್ಕೆ ಸೈನಿಕರನ್ನ, ಸಮಾಜಕ್ಕೆ ರಕ್ಷಕರನ್ನ ಮತ್ತು ಸಮಾಜಮುಖಿ ಯುವಕರನ್ನ ನೀಡುವ ಹೊಣೆ ದಂಪತಿಗಳ ಮೇಲಿದೆ ಎಂದು ಆಶಿಸಿದರು.

ಸಮಾರಂಭದಲ್ಲಿ ೧೨ ನವ ದಂಪತಿಗಳು ಸಪ್ತಪದಿ ತುಳಿದರು. ಇದೇ ವೇಳೆ ಶಾಸಕರ ₹೨೫ ಲಕ್ಷ ಅನುದಾನದಲ್ಲಿ ಬಸವೇಶ್ವರ ದೇಗುಲದ ಜೀರ್ಣೋದ್ಧಾರ ಕಾಮಗಾರಿಗೆ ಕೃಷ್ಣನಾಯ್ಕ ಚಾಲನೆ ನೀಡಿದರು. ಮುಖಂಡರಾದ ಆರ್.ಶಂಕರಗೌಡ, ಬಸವನಗೌಡ, ಉಮೇಶ ಹಾಂದ್ರಳ್, ಮಹೇಶ ಹಾಂದ್ರಳ್, ಮಂಜುನಾಥ, ಜಿ.ಮರಿಯಪ್ಪ, ಭೀಮಜ್ಜ, ಮಲ್ಲನಗೌಡ, ಶಿವರಾಜ ಮತ್ತಿತರರು ಇದ್ದರು.