ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ವ್ಯಾಪ್ತಿಗೊಳಪಡುವ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸದಾಗಿ 12 ಮತಗಟ್ಟೆ ಸ್ಥಾಪನೆ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗಮನಕ್ಕೆ ತಂದರು. ಸೋಮವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಹೊಸದಾಗಿ 12 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಹೊಸ ಮತಗಟ್ಟೆಗಳ ವಿವರ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಕಿ.ಮೀ.ಗಿಂತ ಹೆಚ್ಚು ದೂರವಿರುವ ಮತಗಟ್ಟೆ ಹಾಗೂ 1500ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮತಗಟ್ಟೆಗಳನ್ನು ಸ್ಥಾಪಿಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ನಗರ ವ್ಯಾಪ್ತಿಯ 2 ಕಿ.ಮೀ.ಗಿಂತ ಹೆಚ್ಚು ದೂರವಿರುವ ಎಸ್.ಎನ್.ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ (ಮತಗಟ್ಟೆ ಸಂಖ್ಯೆ-೪ಎ) ; 1500ಕ್ಕೂ ಹೆಚ್ಚು ಮತದಾರರಿರುವ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ಮತಗಟ್ಟೆ ಸಂಖ್ಯೆ-9ಎ), ಶಿರಾಗೇಟ್ ಉತ್ತರ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ(13ಎ), ಅಗ್ರಹಾರ ಶಿಶುವಿಹಾರ ಆವರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ(30ಎ), ಗಾಂಧಿನಗರದ ವಿದ್ಯೋದಯ ಕಾನೂನು ಕಾಲೇಜು(73ಎ), ಚಾಂದನಿ ಚೌಕ ಭಾರತ ಮಾತಾ ಆಂಗ್ಲ ಹಿರಿಯ ಪ್ರಾಥಮಿಕ ಪಾಠಶಾಲೆ(83ಎ), ಭೈರವೇಶ್ವರ ಪದವಿ ಪೂರ್ವ ಕಾಲೇಜು(122ಎ), ಉಪ್ಪಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(158ಎ), ಸರಸ್ವತಿ ಪುರಂ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಪಾಠಶಾಲೆ(160ಎ), ಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(164ಎ), ಮರಳೂರು ಮಾವಿನತೋಪು ಅಂಕಿತ ಕಿರಿಯ ಪ್ರಾಥಮಿಕ ಪಾಠಶಾಲೆ(165ಎ), ಬಡ್ಡಿಹಳ್ಳಿ ಎಸ್.ಆರ್.ಎಸ್. ಹಿರಿಯ ಪ್ರಾಥಮಿಕ ಪಾಠಶಾಲೆ(220ಎ) ಸೇರಿ ಹೊಸದಾಗಿ 12 ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು. ಅಲ್ಲದೆ ಶಿಥಿಲವಾಗಿರುವ ಕಟ್ಟಡ, ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ 2,132-ತುಮಕೂರು ನಗರ ವಿ.ಸ.ಕ್ಷೇತ್ರದಲ್ಲಿ 4 ಹಾಗೂ ಮಧುಗಿರಿ ವಿ.ಸ.ಕ್ಷೇತ್ರದಲ್ಲಿ 1 ಸೇರಿದಂತೆ ಒಟ್ಟು 7 ಮತಗಟ್ಟೆಗಳನ್ನು ಸ್ಥಳಾಂತರಿಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ....ಪ್ರತಿ ವರ್ಷದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಈಗಾಗಲೇ ಕಳೆದ ಆಗಸ್ಟ್ 20 ರಿಂದ ಮನೆ ಮನೆ ಸಮೀಕ್ಷೆ ಕೈಗೊಂಡಿದ್ದು, ಶೇ. 98ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಸಮೀಕ್ಷೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆ, ಸ್ಥಳಾಂತರಗೊಳಿಸಲು ಉದ್ದೇಶಿಸಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ.ದಿನಾಂಕ 1-1-2025 ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ತೆಗೆದು ಹಾಕುವುದು, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಚುನಾವಣಾ ತಹಸೀಲ್ದಾರ್ ರೇಷ್ಮೆ, ಮಹಾನಗರ ಪಾಲಿಕೆ ಉಪ ಆಯುಕ್ತ (ಆಡಳಿತ) ಗಿರೀಶ್, ಉಪ ಆಯುಕ್ತ (ಕಂದಾಯ) ರುದ್ರಮುನಿ, ತಿಪಟೂರು ತಾಲೂಕು ತಹಸೀಲ್ದಾರ್ ಎನ್. ಪವನ್ ಕುಮಾರ್, ಮಧುಗಿರಿ ತಾಲೂಕು ತಹಸೀಲ್ದಾರ್ ಶಿರಿನ್ ತಾಜ್ ಸೇರಿದಂತೆ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.