ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರುಎಂದಿನಂತೆ ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದಾಗ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾಳಿಂಗೇರಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ದೀಕ್ಷಾ ಕೆ. (೧೨) ಮೃತಳು. ಆರೋಗ್ಯವಂತ ಬಾಲಕಿ ಇದ್ದಕ್ಕಿದ್ದಂತೆ ಕುಸಿದ ಬಿದ್ದು ಸಾವನ್ನಪ್ಪಿರುವುದಕ್ಕೆ ಹೃದಯಾಘಾತ ಕಾರಣವಿರಬಹುದೆಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.ತಲೆ ಬಾಚಿಕೊಳ್ಳುವಾಗ ಇದ್ದಕ್ಕಿದ್ದಂತೆ ಮನೆಯಲ್ಲಿ ಬಾಲಕಿ ಕುಸಿದು ಬಿದ್ದ ಕೂಡಲೆ ಪಾಲಕರು ಬಾಲಕಿಯನ್ನು ಸಮೀಪದ ಚೋರುನೂರು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿನ ವೈದ್ಯರು ಪ್ರಾಥಮಿಕ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಬರುವ ಮುಂಚೆ ಮಾರ್ಗಮಧ್ಯದಲ್ಲಿಯೇ ಬಾಲಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಬಾಲಕಿ ಕಾಳಿಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಷಯ ತಿಳಿದು ಶಾಸಕಿ ಈ. ಅನ್ನಪೂರ್ಣ ತುಕಾರಾಂ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪವನ್‌ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಸಂಡೂರಿನ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಳು. ಬಾಲಕಿಯ ಸಾವಿಗೆ ಸೂಕ್ತ ಕಾರಣವನ್ನು ತಿಳಿಯಲು ಬಾಲಕಿಯ ಮೃತದೇಹವನ್ನು ಬಳ್ಳಾರಿಯ ವಿಧಿ ವಿಜ್ಞಾನ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದೇವೆ. ಪರೀಕ್ಷೆಯ ನಂತರ ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು. ತೋಳ ದಾಳಿ, 3 ಟಗರು 10 ಕುರಿ ಬಲಿ:ತೋಳದ ದಾಳಿಗೆ 3 ಟಗರು ಮತ್ತು 10 ಕುರಿಗಳು ಮೃತಪಟ್ಟ ಘಟನೆ ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ.ಗ್ರಾಮದ ಎನ್.ಲಿಂಗಪ್ಪ ಎಂಬವರಿಗೆ ಸೇರಿದ ಕುರಿಗಳಾಗಿವೆ ಎಂದು ತಿಳಿದುಬಂದಿದೆ. ₹1.20 ಲಕ್ಷ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದ್ದು, ಪರಿಹಾರ ನೀಡುವಂತೆ ಕುರಿ ಮಾಲೀಕ ಮನವಿ ಮಾಡಿದರು.ತೋಳದ ಸೆರೆಗೆ ಮನವಿ:
ಅನೇಕ ದಿನಗಳಿಂದ ಗ್ರಾಮದ ಹೊರವಲಯದಲ್ಲಿ ತೋಳದ ಚಲನವಲನವಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಪಟ್ಟಣದ ಪಶು ಆಸ್ಪತ್ರೆ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿ ಕೆ.ಯು. ಬಸವರಾಜ ಮಾತನಾಡಿ, ಪ್ರಸ್ತುತ ಘಟನೆ ಕುರಿತಂತೆ ತಾಲೂಕಿನ ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ವೈದ್ಯ ಡಾ. ಪ್ರದೀಪ್‌ಕುಮಾರ್ ಡಿ. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಅವರು ನೀಡುವ ವರದಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ತುಂಗಭದ್ರಾ ನದಿಯಲ್ಲಿ ಸತ್ತ ಮೊಸಳೆ ಪತ್ತೆಕಂಪ್ಲಿ ಸಮೀಪದ ತುಂಗಭದ್ರಾ ನದಿ ಮಧ್ಯದಲ್ಲಿ ಬಂಡೆಗಲ್ಲಿನ ಮೇಲೆ ಸತ್ತ ಮೊಸಳೆ ಪತ್ತೆಯಾಗಿದೆ. ಸೋಮವಾರ ಮಧ್ಯಾಹ್ನ ಸೇತುವೆ ಮೇಲೆ ನಿಂತು ದಾರಿಹೋಕರು ಬಂಡೆ ಮೇಲೆ ಮಲಗಿದ್ದ ಮೊಸಳೆಯನ್ನು ನೋಡುತ್ತಿದ್ದರು. ಮೀನುಗಾರರು ಹತ್ತಿರಕ್ಕೆ ಹೋಗಿ ನೋಡಿದಾಗ ಮೊಸಳೆ ಸತ್ತಿರುವುದನ್ನು ಗಮನಿಸಿದ್ದಾರೆ. ಬಂಡೆಗಲ್ಲಿನ ಮೇಲೆ ಮೊಸಳೆ ಬೋರಲು ಬಿದ್ದಿದ್ದು ಬಾಲದ ತುದಿ ಕತ್ತರಿಸಿದಂತಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.