ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಆರಂಭದಲ್ಲಿ ಗಿಡಗಳನ್ನು ನೆಡಲು ಶುರು ಮಾಡಿದಾಗ ಜನರು ನನ್ನನ್ನು ಹುಚ್ಚನೆಂದು ಕರೆಯುತ್ತಿದ್ದರು. ಆದರೆ ಇದೀಗ 12 ರಾಜ್ಯಗಳಲ್ಲಿ 121 ಕಾಡುಗಳನ್ನು ಬೆಳೆಸಿದ್ದೇನೆ. 122ನೇ ಕಾಡನ್ನು ರಾಜಸ್ತಾನದಲ್ಲಿ ಆರಂಭಿಸಿರುವುದಾಗಿ ಹೆಸರಾಂತ ಪರಿಸರವಾದಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ. ನಾಯರ್ ಹೇಳಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಜರಾತ್‌ನ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಸಣ್ಣ ಕಾಡು ಬೆಳೆಸಿ ನೋಡಿದೆ. ಇದು ಅತ್ಯಂತ ಯಶಸ್ವಿಯಾಗಿದ್ದು, ಬೇರೆ ಕಡೆಗಳ ಇಂಡಸ್ಟ್ರಿಯಲ್ ಎಸ್ಟೇಟ್‌ಗಳಿಂದಲೂ ಇದೇ ರೀತಿಯ ಕಾಡು ಬೆಳೆಸಲು ಬೇಡಿಕೆ ಬರತೊಡಗಿತು. ಇದಾದ ಬಳಿಕ ಮಹಾರಾಷ್ಟ್ರದ ಕೆಮಿಕಲ್ ಡಂಪಿಂಗ್ ಯಾರ್ಡ್‌ನಲ್ಲಿ ಗಿಡಗಳನ್ನು ನೆಡುತ್ತಾ, ಜಗತ್ತಿನ ಅತಿ ದೊಡ್ಡ ಮಿಯಾವಕಿ ಕಾಡು ಸೃಷ್ಟಿಸಿದೆ ಎಂದರು.ಗುಜರಾತ್‌ನಲ್ಲಿ ಪರ್ವತದ ಮೇಲೆ ಕಾಡು ಬೆಳೆಯಲು ಸಾಧ್ಯವೇ ಇಲ್ಲ ಎಂಬಂಥ ಜಾಗದಲ್ಲೂ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಉದ್ಘಾಟನೆ ನೆರವೇರಿಸಿದಾಗ ಅಲ್ಲಿನ ಗಿಡಗಳು 18 ಅಡಿಗೂ ಹೆಚ್ಚು ಬೆಳೆದು ದಟ್ಟ ಕಾಡಾಗಿತ್ತು. ಈ ಸ್ಮೃತಿ ವನಕ್ಕೆ ಸ್ವತಃ ರಾಷ್ಟ್ರಪತಿಗಳೇ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾವಿರಕ್ಕೂ ಅಧಿಕ ಪಕ್ಷಿಗಳು, ಮೀನು ಸೇರಿದಂತೆ ಅಸಂಖ್ಯ ಜಲಚರಗಳ ಆವಾಸಸ್ಥಾನವಾಗಿದೆ. ಹೀಗೆ ರಾಜ್ಯದಿಂದ ರಾಜ್ಯಕ್ಕೆ ಕಾಡು ಬೆಳೆಯುವ ಕಾರ್ಯ ಈಗಲೂ ಮುಂದುವರಿದಿದೆ ಎಂದು ಡಾ.ಆರ್.ಕೆ. ನಾಯರ್ ಹೇಳಿದರು.
ಸುಳ್ಯದಿಂದ ರಾಷ್ಟ್ರ ಮಟ್ಟಕ್ಕೆ:ನಾನು ಹುಟ್ಟಿದ್ದು ಕಾಸರಗೋಡಿನಲ್ಲಿ. 4ನೇ ವಯಸ್ಸಿನಲ್ಲೇ ನಮ್ಮ ಕುಟುಂಬ ಸುಳ್ಯಕ್ಕೆ ಬಂದು ಅಲ್ಲಿನ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿತ್ತು. 12ನೇ ತರಗತಿ ಫೇಲಾದ ಬಳಿಕ ಗೆಳೆಯನೊಂದಿಗೆ ಮುಂಬೈಗೆ ತೆರಳಿ ಅಲ್ಲಿ ಮೆಡಿಕಲ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್, ಹೊಟೇಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದೆ. ಬಳಿಕ ಗಾರ್ಮೆಂಟ್‌ನಲ್ಲಿ ಲೇಯರಿಂಗ್ ಕೆಲಸ ಶುರುಮಾಡಿ ಪ್ರೊಡಕ್ಷನ್ ಮ್ಯಾನೇಜರ್ ಹಂತಕ್ಕೆ ತಲುಪಿದೆ. ಅದಾದ ನಂತರ ಗುಜರಾತ್‌ನಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಆಗಿ 10 ವರ್ಷ ಕೆಲಸ ಮಾಡಿ, ಸ್ವಂತ ಫ್ಯಾಕ್ಟರಿ ಶುರು ಮಾಡಿದೆ. ಸೌಪರ್ಣಿಕಾ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್ ಈಗಲೂ ನಡೆಯುತ್ತಿದೆ. ಈ ನಡುವೆ ನನ್ನ ಎದುರಲ್ಲೇ ಮರವೊಂದು ಕಡಿದು ಬಿದ್ದಾಗ ಹಕ್ಕಿಗಳ ಆರ್ತನಾದ ಕೇಳಿ ತಳಮಳಗೊಂಡು ಕಾಡು ನೆಟ್ಟು ಬೆಳೆಸುವ ನಿರ್ಧಾರ ಮಾಡಿದೆ ಎಂದು ಆ ದಿನಗಳನ್ನು ಸ್ಮರಿಸಿದರು.
ತುಳುವಿನಲ್ಲಿ ಪ್ರಾರ್ಥನೆ:ಪ್ರತಿಬಾರಿ ಗಿಡ ನೆಡಲು ಆರಂಭಿಸುವಾಗ ತುಳುವಿನಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದಿದ್ದೇನೆ. ನಾನು ನೆಟ್ಟು ಬೆಳೆಸಿದ ಕಾಡಿನಲ್ಲಿ ನಡೆಯುವಾಗ ಅಲ್ಲಿನ ಪಕ್ಷಿ, ಪ್ರಾಣಿ ಪ್ರಪಂಚವನ್ನು ನೋಡುವಾಗ ಸಾರ್ಥಕ ಭಾವ ಸಿಗುತ್ತದೆ. ಕಾಡಿನಲ್ಲಿನ ಮರಗಳು, ಪಕ್ಷಿಗಳ ಜತೆಗೂ ನಾನು ಮಾತುಕತೆ ನಡೆಸುತ್ತೇನೆ. ನಾನು ಹೋದಾಗಲೆಲ್ಲ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸ್ವಾಗತಿಸುತ್ತವೆ ಎಂದು ಡಾ.ನಾಯರ್ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ, ನಾಯಕ್ ಇಂದಾಜೆ ಇದ್ದರು. ಆರ್.ಸಿ. ಭಟ್ ನಿರೂಪಿಸಿದರು..............ಪಾದರಕ್ಷೆ ಹಾಕಲ್ಲ, ಮುಟ್ಟಾಳೆ ತಪ್ಪಿಸಿಲ್ಲ
ಕಳೆದ 19 ವರ್ಷಗಳಿಂದ ಪಾದರಕ್ಷೆಯನ್ನೇ ಹಾಕಿಲ್ಲ. ಏಳೆಂಟು ವರ್ಷಗಳಿಗೂ ಅಧಿಕ ಕಾಲದಿಂದ ತಲೆ ಮೇಲೆ ಅಡಕೆ ಹಾಳೆಯ ಮುಟ್ಟಾಳೆ ಧರಿಸುತ್ತಿದ್ದೇನೆ. ಮುಂಚೆ ಪ್ಯಾಂಟ್, ಶರ್ಟ್ ಧರಿಸುತ್ತಿದ್ದವನಿಗೆ ಈಗ ಪಂಚೆಯೇ ಪ್ರಿಯವಾಗಿದೆ. ಇದನ್ನೇ ಹಾಕಿಕೊಂಡು ಎಲ್ಲ ಏರ್‌ಪೋರ್ಟ್‌ಗಳಿಗೂ, ಎಲ್ಲ ಬಗೆಯ ವಿಮಾನಗಳಲ್ಲೂ ಹೋಗಿ ಬಂದಿದ್ದೇನೆ. ಈ ಭೂಮಿ ಮೇಲೆ ನಾವ್ಯಾರೂ ಶಾಶ್ವತ ಅಲ್ಲ. ನಮ್ಮ ಕೈಯಲ್ಲಿ ಪ್ರಕೃತಿ ಸಂರಕ್ಷಣೆ ಮಾಡಲು ಸಾಧ್ಯವಾಗದೆ ಇದ್ದರೂ ಪ್ರಕೃತಿಗೆ ಹಾಳು ಮಾಡುವ ಕೆಲಸ ಮಾತ್ರ ಮಾಡಬಾರದು ಎಂದು ಡಾ.ನಾಯರ್ ಮನವಿ ಮಾಡಿದರು.