ಸಾರಾಂಶ
ಡಾ.ನಿರ್ಮಲಾನಂದನಾಥಶ್ರೀಗಳಿಗೆ ಚಿನ್ನ ಲೇಪಿತ ಶಾಲು, ಚಿನ್ನದ ಕಿರೀಟ ಧಾರಣೆ ಮಾಡಿ, ಕಂಠಿ ಹಾರ ಸೇರಿದಂತೆ ಚಿನ್ನ ಹಾಗೂ ರುದ್ರಾಕ್ಷಿ ಹಾರಗಳನ್ನು ಹಾಕಿ ಪುಷ್ಪಾರ್ಚನೆ ಮಾಡಲಾಯಿತು.
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ 12ನೇ ಪಟ್ಟಾಭಿಷೇಕ ಮಹೋತ್ಸವವು ಗುರುವಾರ ಬಹಳ ವಿಜೃಂಭಣೆಯಿಂದ ನೆರೆವೇರಿತು. ಸಿಂಹಾಸನದ ಮೇಲೆ ವಿರಾಜಮಾನರಾದ ಡಾ.ನಿರ್ಮಲಾನಂದನಾಥಶ್ರೀಗಳಿಗೆ ಚಿನ್ನ ಲೇಪಿತ ಶಾಲು, ಚಿನ್ನದ ಕಿರೀಟ ಧಾರಣೆ ಮಾಡಿ, ಕಂಠಿ ಹಾರ ಸೇರಿದಂತೆ ಚಿನ್ನ ಹಾಗೂ ರುದ್ರಾಕ್ಷಿ ಹಾರಗಳನ್ನು ಹಾಕಿ ಪುಷ್ಪಾರ್ಚನೆ ಮಾಡಲಾಯಿತು. ನಂತರ ಭಕ್ತಿ, ಭಾವದಿಂದ ಮಹಾಮಂಗಳಾರತಿ ಮಾಡಿ ಮಂಗಳವಾದ್ಯದೊಂದಿಗೆ ಪೂಜೆ ನೆರೆವೇರಿಸುವ ಮೂಲಕ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಹಾಗೂ ವಿದ್ಯಾರ್ಥಿಗಳು ಶ್ರೀಗಳ ದರ್ಶನಾಶೀರ್ವಾದ ಪಡೆದರು. ನಂತರ ಗಣ್ಯರು ಶ್ರೀಗಳಿಗೆ ಶಾಲು, ಹಾರ ಹಾಕಿ, ಹಣ್ಣಿನ ಬುಟ್ಟಿ ನೀಡಿ ಗುರು ನಮನ ಸಮರ್ಪಿಸಿದರು.