ಕುಷ್ಟಗಿ ತಾಲೂಕಿನ ಚಳಗೇರಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನ. 3, 4 ಮತ್ತು 5ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕುಷ್ಟಗಿ: ತಾಲೂಕಿನ ಚಳಗೇರಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನ. 3, 4 ಮತ್ತು 5ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವ ಸಮಿತಿಯ ಅಧ್ಯಕ್ಷ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದರು.

ತಾಲೂಕಿನ ಚಳಗೇರಿ ಶ್ರೀಮಠದಲ್ಲಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾಗವಾನಿ ಮರದ ನೂತನ ಮಹಾರಥ ಉದ್ಘಾಟಿಸಲಾಗುವುದು. ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವವೂ ವಿಜೃಂಭಣೆಯಿಂದ ಜರುಗಲಿದೆ ಎಂದರು.

ಸುತ್ತೂರು ಶ್ರೀಗಳು, ತುಮಕೂರು ಶ್ರೀಗಳು, ಆನಂದ ಗುರೂಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ವಿಭಾಗೀಯ ಕಾನೂನು ಅಧಿಕಾರಿ ಹಾಗೂ ಸಮಿತಿಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಮಾತನಾಡಿ, ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವ, ನೂತನ ಮಹಾರಥೋತ್ಸವ ಉದ್ಘಾಟನೆ, ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ಸುವರ್ಣ ಮಹೋತ್ಸವ ಹಾಗೂ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವ ನಡೆಯಲಿದ್ದು, ಇದರೊಂದಿಗೆ 108 ಶ್ರೀಗಳ ಪಾದಪೂಜೆ, ಉಚಿತ ಆರೋಗ್ಯ ಶಿಬಿರಗಳು, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನೂತನ ಮಹಾರಥೋತ್ಸವದ ಬಳಿಕ ಮದ್ದು ಸುಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಎಲ್ಲ ಸಮಾಜಗಳ ಗುರುಗಳ ಭಾವಚಿತ್ರಗಳನ್ನು ಒಳಗೊಂಡ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದು ಹೇಳಿದರು.

ಚಳಗೇರಿ ಶ್ರೀಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. 108 ಹಳ್ಳಿಗಳ ಭಕ್ತರು ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಗಣ್ಯರಾದ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ, ಲಾಡ್ಲೇಮಷಾಕ ದೋಟಿಹಾಳ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಮೇಳಿ, ನಾಗಪ್ಪ ಗುಡದೂರು, ಸಂಗಪ್ಪ ಶೆಟ್ಟರ, ಹನುಮಂತಪ್ಪ, ಚನ್ನಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.