ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಜ.12ರಿಂದ 14ರ ವರೆಗೆ ದೇವದುರ್ಗ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ–2024 ನಡೆಯಲಿದ್ದು, ಎಂದು ಹಾಲುಮತ ಸಮಾಜದ ಸಿದ್ದರಮಾನಂದ ಸ್ವಾಮಿ ತಿಳಿಸಿದರು.ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯ ಮುಖ್ಯವಾಹಿನಿಯಿಂದ ತಾತ್ಸಾರಕ್ಕೆ ಒಳಗಾಗಿದೆ. ಜಾತಿಗಳು ಸಾಂಸ್ಕೃತಿ, ಆಚರಣೆಯ ಸಂಕೇತ ಆದರೆ ಅದು ಜಾತಿಗಳೆಂದು ನೋಡಲಾಗುತ್ತಿದೆ. ಆಯಾ ಜನಾಂಗದ ಸಂಸ್ಕೃತಿಯ ಅನಾವರಣ ಜಾಗೃತಿ ನಡೆಯಬೇಕು. ಈ ನಿಟ್ಟಿನಲ್ಲಿ 2007ರಿಂದ ಹಾಲುಮತ ಉತ್ಸವ ನಡೆಯುತ್ತಿದೆ. ಇದು ಕುರುಬರ ಉತ್ಸವವಲ್ಲ ಅನೇಕ ಸಂಸ್ಕೃತಿಗಳ ಪರಿಚಯದ ಭಾಗವಾಗಿದೆ ಎಂದರು.
ಜ.12ರಂದು ಬೆಳಗ್ಗೆ 7ಕ್ಕೆ ಹೊಳೆ ಪೂಜೆ, ಪಲ್ಲಕ್ಕಿ ಮೆರವಣಿಗೆ, ಅಭಿಷೇಕ, ಬೆಳಗ್ಗೆ 10ಕ್ಕೆ ಬೀದರ್ ಜಿಲ್ಲೆಯ ಅಮೃತರಾವ್ ಚಿಮ್ಕೋಡೆ ಹಾಲುಮತ ಧರ್ಮ ಧ್ವಜಾರೋಹಣ ಮಾಡಲಿದ್ದಾರೆ. ‘ಹಾಲುಮತ ಸಾಹಿತ್ಯ ಕಾರ್ಯಾಗಾರ’ ವನ್ನು ಹಿರಿಯ ಚಿಂತಕ ಪ್ರೊ.ಎಸ್.ಜಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ಕೆ ರವಿ, ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನದ ಮುಖ್ಯಸ್ಥ ಡಾ.ಕೆ.ಎಂ ಮೇತ್ರಿ, ಸಂಶೋಧಕ ಲಿಂಗದಳ್ಳಿ ಹಾಲಪ್ಪ, ಚಂದ್ರಕಾಂತ್ ಬಿಜ್ಜರಗಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದೆ.ಮಧ್ಯಾಹ್ನ 12ಕ್ಕೆ ಯುವಜನ ಸಮಾವೇಶ ನಡೆಯಲಿದ್ದು, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಭಗವಂತ ಖೂಬಾ, ಸಂಸದರಾದ ಉಮೇಶ ಜಾಧವ್, ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ತು ಸದಸ್ಯರಾದ ಎಂ. ಟಿ. ಬಿ ನಾಗರಾಜ, ದೊಡ್ಡನಗೌಡ ಪಾಟೀಲ, ಶಾಸಕ ಶರಣು ತಳ್ಳಿಕೇರಿ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.ವಿದ್ಯಾರ್ಥಿ ನಿಲಯ ಭೂಮಿ ಪೂಜೆಗೆ ಸಿದ್ದರಾಮಯ್ಯ ಭಾಗಿ: ಜನವರಿ 13 ರಂದು ‘ಧಾರ್ಮಿಕ ಹಾಗೂ ಸಾಮಾಜಿಕ ನ್ಯಾಯ’ ಎಂಬ ವಿಷಯದ ಕುರಿತು ಚರ್ಚಾ ಗೋಷ್ಠಿ ನಡೆಯಲಿದೆ. ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದು, ಸಚಿವ ಎನ್ ಎಸ್ ಬೋಸರಾಜು, ವಿಶ್ವನಾಥ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಹಾಲುಮತ ಭಾಸ್ಕರ್ ಪ್ರಶಸ್ತಿ ಹಾಗೂ ಕನಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ವೇಳೆ ವಿದ್ಯಾರ್ಥಿ ನಿಲಯ ಭೂಮಿ ಪೂಜೆ ಮತ್ತು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕೆ.ಆರ್.ನಗರ ಕನಕ ಗುರುಪೀಠದ ಶ್ರೀ ಶಿವಾನಂದ ಸ್ವಾಮಿ, ಸಿಂಧಿಗೆಯ ಅಭಿನವ ಪುಂಡಲಿಂಗ ಮಹಾರಾಜ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಚಿವ ಪ್ರಿಯಾಂಕ ಖರ್ಗೆ, ಶರಣಪ್ರಕಾಶ ಪಾಟೀಲ ಭಾಗವಹಿಸಲಿದ್ದಾರೆ ಎಂದರು.
ಜ.14 ರಂದು ‘ಹಾಲುಮತ ಮಾತೃಶಕ್ತಿ ಸಮಾವೇಶ’ ನಡೆಯಲಿದೆ. ಈಶ್ವರಾನಂದದ ಪುರಿ ಸ್ವಾಮಿ, ಮಲ್ಲಾರಲಿಂಗ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರ ಉದ್ಘಾಟನೆ ಮಾಡಲಿದ್ದಾರೆ. ವಿಶ್ರಾಂತಿ ಉಪಕುಲಪತಿ ಡಾ. ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಮೂರು ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೃಭವದಲ್ಲಿ ಸಾವಯವ ಕೃಷಿ ಉತ್ಪನ್ನ ಸಿರಿಧಾನ್ಯ ಮಳಿಗೆ, ಉಣ್ಣೆ ಉತ್ಪನ್ನ ಮಳಿಗೆ, ಹಾಲುಮತ ಸಾಹಿತ್ಯ ಮಳಿಗೆ ಮತ್ತು ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ, ಟಗರು ಕಾಳಗ, ಎತ್ತುಗಳಿಂದ ಭಾರ ಕಲ್ಲು ಎಳೆಯುವ ಸ್ಪರ್ಧೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ರಾಜ್ಯಾಧ್ಯಕ್ಷ ಎಂ. ಈರಣ್ಣ, ಲಕ್ಷ್ಮಣ ತಾತ, ಮುಖಂಡರಾದ ಕೆ.ಬಸವಂತಪ್ಪ, ಹನುಮಂತ, ಮಹಾದೇವಪ್ಪ, ನಾಗರಾಜ, ನೀಲಕಂಠ ಬೇವಿನ್, ನಾಗೇಂದ್ರಪ್ಪ ಮಟಮಾರಿ ಇದ್ದರು.