ಹಾಲು ಉತ್ಪಾದಕರಿಗೆ ₹ 13.89 ಕೋಟಿ ಪ್ರೋತ್ಸಾಹಧನ ಬಾಕಿ

| Published : May 19 2024, 01:52 AM IST

ಹಾಲು ಉತ್ಪಾದಕರಿಗೆ ₹ 13.89 ಕೋಟಿ ಪ್ರೋತ್ಸಾಹಧನ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಬರಗಾಲದಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಹೈನುಗಾರಿಕೆಯನ್ನೇ ನೆಚ್ಚಿಕೊಂಡವರು ಸರ್ಕಾರದ ಪ್ರೋತ್ಸಾಹಧನಕ್ಕೆ ಕಾಯುವಂತಾಗಿದೆ. ಜಿಲ್ಲೆಯ ಹಾಲು ಉತ್ಪಾದಕರಿಗೆ ಕಳೆದ 8 ತಿಂಗಳಿಂದ ಬರೋಬ್ಬರಿ 13.89 ಕೋಟಿ ರು. ಪ್ರೋತ್ಸಾಹಧನ ಸರ್ಕಾರದಿಂದ ಬರುವುದು ಬಾಕಿಯಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಬರಗಾಲದಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಹೈನುಗಾರಿಕೆಯನ್ನೇ ನೆಚ್ಚಿಕೊಂಡವರು ಸರ್ಕಾರದ ಪ್ರೋತ್ಸಾಹಧನಕ್ಕೆ ಕಾಯುವಂತಾಗಿದೆ. ಜಿಲ್ಲೆಯ ಹಾಲು ಉತ್ಪಾದಕರಿಗೆ ಕಳೆದ 8 ತಿಂಗಳಿಂದ ಬರೋಬ್ಬರಿ 13.89 ಕೋಟಿ ರು. ಪ್ರೋತ್ಸಾಹಧನ ಸರ್ಕಾರದಿಂದ ಬರುವುದು ಬಾಕಿಯಿದೆ.

ಭೀಕರ ಬರಗಾಲದಿಂದ ಮೇವು, ನೀರು ಇಲ್ಲದೇ ಹೈನುಗಾರಿಕೆ ಮೇಲೆ ಭಾರಿ ಹೊಡೆತ ಬಿದ್ದಿದೆ. ಹಾಲು ಉತ್ಪಾದನೆ ಕೂಡ ಕುಂಠಿತವಾಗಿದೆ. ಹೈನುರಾಸು ನಿರ್ವಹಣೆ ಕಷ್ಟಕರವಾಗುತ್ತಿದೆ. ಇದರಿಂದ ಹೈನುಗಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚುತ್ತಿದೆ. ಸರ್ಕಾರವು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ನೀಡುವ 5 ರು. ಪ್ರೋತ್ಸಾಹಧನವನ್ನೇ ರೈತರು ನೆಚ್ಚಿಕೊಂಡಿದ್ದಾರೆ. ಹಾವೇರಿ ಪ್ರತ್ಯೇಕ ಹಾಲು ಒಕ್ಕೂಟವಾದ ಬಳಿಕ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದ್ದು, ಹಾಲು ಉತ್ಪಾದನೆಯೂ ಹೆಚ್ಚಿತ್ತು. ಆದರೆ, ಬರಗಾಲದ ಹೊಡೆತಕ್ಕೆ ಹೈನುಗಾರರು ನಲುಗುತ್ತಿದ್ದಾರೆ. ಆದರೆ, ಬರಗಾಲದ ಸಂಕಷ್ಟ ಸಮಯದಲ್ಲೂ ಸರ್ಕಾರ ಕಳೆದ 8 ತಿಂಗಳಿಂದ ಪ್ರೋತ್ಸಾಹಧನ ನೀಡದಿರುವುದು ಹಾಲು ಉತ್ಪಾದಕರನ್ನು ಸಂಕಷ್ಟಕ್ಕೆ ನೂಕಿದಂತಾಗಿದೆ.

13.89 ಕೋಟಿ ರು. ಬಾಕಿ: ಜಿಲ್ಲೆಯ ಸುಮಾರು 20 ಸಾವಿರ ಹೈನುಗಾರರಿಗೆ ಕಳೆದ ಸೆಪ್ಟೆಂಬರ್‌ನಿಂದ ಏಪ್ರಿಲ್‌ವರೆಗೆ 13.89 ಕೋಟಿ ರು. ಪ್ರೋತ್ಸಾಹಧನ ಬಾಕಿಯಿದೆ. ಸೆಪ್ಟೆಂಬರ್‌ನಲ್ಲಿ 1.77 ಕೋಟಿ ರು., ಅಕ್ಟೋಬರ್‌ನಲ್ಲಿ 1.91 ಕೋಟಿ, ನವೆಂಬರ್‌ನಲ್ಲಿ 1.77 ಕೋಟಿ, ಡಿಸೆಂಬರ್‌ನಲ್ಲಿ 1.78 ಕೋಟಿ, ಜನವರಿಯಲ್ಲಿ 1.77 ಕೋಟಿ, ಫೆಬ್ರುವರಿಯಲ್ಲಿ 1.60 ಕೋಟಿ, ಮಾರ್ಚ್‌ನಲ್ಲಿ 1.66 ಕೋಟಿ ಹಾಗೂ ಏಪ್ರಿಲ್‌ನಲ್ಲಿ 1.59 ಕೋಟಿ ರು. ಪ್ರೋತ್ಸಾಹಧನ ಬರಬೇಕಿದೆ.

ಖರ್ಚಿನಲ್ಲಿ ಹೆಚ್ಚಳ:ಹೈನುಗಾರಿಕೆಗೆ ಉತ್ತೇಜನ ಸಿಗುತ್ತಿರುವುದರಿಂದ ಜಿಲ್ಲೆಯಲ್ಲಿ ಆಕಳು, ಎಮ್ಮೆಗಳ ಸಾಕಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತ್ಯೇಕ ಹಾವೇರಿ ಹಾಲು ಒಕ್ಕೂಟ ರಚನೆಯಾದ ಮೇಲೆ ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚು ಹಾಲು ಶೇಖರಣಾ ದರವನ್ನು ರೈತರಿಗೆ ನೀಡುತ್ತಿದೆ. ಸಣ್ಣ, ಅತಿಸಣ್ಣ ರೈತರೂ ಹೈನುಗಾರಿಕೆ ಮಾಡುತ್ತಿದ್ದಾರೆ. ಸಾವಿರಾರು ಕುಟುಂಬಗಳು ಹಾಲು ಉತ್ಪಾದನೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಕಳೆದ ವರ್ಷ ಮಳೆಯೇ ಆಗದ್ದರಿಂದ ಮೇವು, ನೀರಿನ ಸಮಸ್ಯೆ ಎಲ್ಲೆಡೆ ತೀವ್ರಗೊಂಡಿದೆ. ಅಲ್ಲದೇ ಅತಿಯಾದ ಬಿಸಿಲು, ಸೆಕೆಯ ಕಾರಣಕ್ಕೆ ಹಾಲು ಉತ್ಪಾದನೆಯಲ್ಲಿ ಕುಸಿತವಾಗಿದೆ. ಅದರಲ್ಲೂ ಹೈನುರಾಸುಗಳ ನಿರ್ವಹಣೆಯೇ ಕಷ್ಟಕರವಾಗಿದೆ. ಅಲ್ಲದೇ ಪಶು ಆಹಾರದ ದರವೂ ಹೆಚ್ಚಿರುವುದರಿಂದ ದೈನಂದಿನ ನಿರ್ವಹಣೆಗೂ ರೈತರು ಕಷ್ಟಪಡುತ್ತಿದ್ದಾರೆ. ಆದ್ದರಿಂದ ಸರ್ಕಾರ ನೀಡುವ ಪ್ರೋತ್ಸಾಹಧನವೇ ಆಧಾರವಾಗಿದೆ. ಒಂದೆರಡು ತಿಂಗಳ ಪ್ರೋತ್ಸಾಹಧನ ಬಾಕಿಯಿದ್ದರೆ ಹೇಗೂ ನಿಭಾಯಿಸುತ್ತೇವೆ, ಆದರೆ, 8 ತಿಂಗಳಿಂದ ಪ್ರೋತ್ಸಾಹಧನ ನೀಡದಿದ್ದರೆ ಎಲ್ಲಿಂದ ಹಣ ತರಬೇಕು ಎಂದು ಹೈನುಗಾರರು ಪ್ರಶ್ನಿಸುತ್ತಿದ್ದಾರೆ.

ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ಹಾಲು ಉತ್ಪಾದಕರಿಗೆ ಸರ್ಕಾರದಿಂದ ಬರಬೇಕಿರುವ 13.89 ಕೋಟಿ ರು. ಪ್ರೋತ್ಸಾಹಧನ ಬಂದಿಲ್ಲ. ರೈತರು ಸಂಕಷ್ಟದಲ್ಲಿರುವುದರಿಂದ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಸರ್ಕಾರ ತ್ವರಿತವಾಗಿ ಬಾಕಿ ಬರಬೇಕಿರುವ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುವಂತೆ ಜಿಲ್ಲೆಯ ಸಮಗ್ರ ಹೈನುಗಾರರ ಪರವಾಗಿ ವಿನಂತಿಸಿದ್ದೇನೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.