ಜಿಲ್ಲಾಸ್ಪತ್ರೆಗೆ ವಾಪಸ್ಸಾದ 13 ವೈದ್ಯರು, ಕನ್ನಡಪ್ರಭ ವರದಿಯಿಂದ ಎಚ್ಚೆತ್ತ ಸರ್ಕಾರ

| Published : Sep 21 2025, 02:01 AM IST

ಜಿಲ್ಲಾಸ್ಪತ್ರೆಗೆ ವಾಪಸ್ಸಾದ 13 ವೈದ್ಯರು, ಕನ್ನಡಪ್ರಭ ವರದಿಯಿಂದ ಎಚ್ಚೆತ್ತ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮೂರು ವರ್ಷಕ್ಕೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸಿದ ವೈದ್ಯರು ಮಾತೃ ಇಲಾಖೆಗೆ ಬಂದು ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿತ್ತು.

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಕಾಏಕಿಯಾಗಿ ಮರಳಿ ಪಡೆದ ಬೆನ್ನಲ್ಲೇ ಜನಾಕ್ರೋಶ ವ್ಯಕ್ತಗೊಂಡಿದ್ದರಿಂದ ಆ ವೈದ್ಯರ ಸೇವೆಯನ್ನು ಜಿಲ್ಲಾಸ್ಪತ್ರೆಯಲ್ಲಿಯೇ ಮುಂದುವರಿಸಿ ಸರ್ಕಾರ ಆದೇಶಿಸಿದೆ. ಇದರಿಂದ ಬಡ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲಾಸ್ಪತ್ರೆಯಲ್ಲಿದ್ದ ವೈದ್ಯರು ವಾಪಸ್‌, ರೋಗಿಗಳ ಪರದಾಟ ಎಂಬ ಕುರಿತು ಕನ್ನಡಪ್ರಭ ಸೆ. 19ರಂದು ವರದಿ ಪ್ರಕಟಿಸಿತ್ತು. ಆರೋಗ್ಯ ಇಲಾಖೆಯ ಈ ನಡೆಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಜಿಲ್ಲಾಸ್ಪತ್ರೆಯಿಂದ ಸ್ವಯಂ ಬಿಡುಗಡೆ ಹೊಂದಿ ಆರೋಗ್ಯ ಇಲಾಖೆಗೆ ವರದಿ ಮಾಡಿಕೊಂಡಿದ್ದ 13 ವೈದ್ಯರ ಸೇವೆಯನ್ನು ಜಿಲ್ಲಾಸ್ಪತ್ರೆಯಲ್ಲೇ ಮುಂದುವರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸೆ. 19ರಂದು ಆದೇಶ ಹೊರಡಿಸಿದ್ದಾರೆ.

ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಮೂರು ವರ್ಷಕ್ಕೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸಿದ ವೈದ್ಯರು ಮಾತೃ ಇಲಾಖೆಗೆ ಬಂದು ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿತ್ತು. ಆದರೆ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಹಿಂದಿನ ಜಿಲ್ಲಾಸ್ಪತ್ರೆಯಿಂದ ಪರಿವರ್ತನೆಗೊಂಡು ಒಂದು ವರ್ಷ ಮಾತ್ರ ಆಗಿರುವುದರಿಂದ 13 ವೈದ್ಯರನ್ನು ಮರಳಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮುಂದುವರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದಂತೆ ಶನಿವಾರ ವೈದ್ಯರು ಜಿಲ್ಲಾಸ್ಪತ್ರೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

17 ಶುಶ್ರೂಷಾಧಿಕಾರಿಗಳೂ ವಾಪಸ್‌: ವೈದ್ಯರನ್ನು ವಾಪಸ್‌ ಕರೆಸಿಕೊಂಡ ರೀತಿಯಲ್ಲೇ ಜಿಲ್ಲಾಸ್ಪತ್ರೆಯಲ್ಲಿದ್ದ ಶುಶ್ರೂಷಾಧಿಕಾರಿಗಳೂ ಸೆ. 17 ಮತ್ತು ಸೆ. 18ರಂದು ಇಲ್ಲಿಂದ ಬಿಡುಗಡೆಗೊಂಡು ಮಾತೃ ಇಲಾಖೆಗೆ ವರದಿ ಮಾಡಿಕೊಂಡಿದ್ದರು. 5 ವರ್ಷಕ್ಕೂ ಮೇಲ್ಪಟ್ಟು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶುಶ್ರೂಷಕರ ಸೇವೆಯನ್ನು ಆರೋಗ್ಯ ಇಲಾಖೆ ಹಿಂಪಡೆದಿತ್ತು.

ಆದರೆ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆರಂಭವಾಗಿ ಒಂದು ವರ್ಷ ಆಗಿರುವುದರಿಂದ ಇವರನ್ನು ಮರಳಿ ಜಿಲ್ಲಾಸ್ಪತ್ರೆಯಲ್ಲೇ ಮುಂದುವರಿಯಲು ಅವಕಾಶ ನೀಡಿ ಸೆ. 20ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದರಿಂದ ಹಠಾತ್‌ ವರ್ಗಾವಣೆಗೆ ಒಳಗಾಗುವ ಆತಂಕ ಎದುರಿಸುತ್ತಿದ್ದ ವೈದ್ಯರು ಮತ್ತು ಶುಶ್ರೂಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದೇ ರೀತಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದ್ದ ಜಿಲ್ಲೆಯ ಜನತೆಯೂ ನಿರಾಳರಾಗಿದ್ದಾರೆ.

ಇನ್ನು ಎರಡು ವರ್ಷ ನಿರಾಳ

ಜಿಲ್ಲಾಸ್ಪತ್ರೆಯ ವೈದ್ಯರ ಸೇವೆಯನ್ನು ಇಲ್ಲಿಯೇ ಮುಂದುವರಿಯಲು ಇಲಾಖೆ ಅವಕಾಶ ನೀಡಿದೆ. ಆದ್ದರಿಂದ ಸದ್ಯಕ್ಕೆ ಈ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಇನ್ನು ಎರಡು ವರ್ಷಗಳ ಕಾಲ ಇರಬಹುದು. ಈಗಾಗಲೇ ಒಂದು ವರ್ಷ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಡಿಯಲ್ಲಿ ಸೇವೆ ಸಲ್ಲಿಸಿರುವುದರಿಂದ ಇವರ ಸೇವೆ ಮೂರು ವರ್ಷವಾದ ತಕ್ಷಣ ಬಿಡುಗಡೆ ಮಾಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಸಮಸ್ಯೆ ನಿವಾರಣೆ: ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಇಲ್ಲಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಹೋಗಿ ಮಾತೃ ಇಲಾಖೆಗೆ ವರದಿ ಮಾಡಿಕೊಂಡಿದ್ದರು. ಅದೇ ರೀತಿ ಶುಶ್ರೂಷಾಧಿಕಾರಿಗಳೂ ಬಿಡುಗಡೆಯಾಗಿದ್ದರು. ಅವರ ಸೇವೆಯನ್ನು ಇಲ್ಲಿಯೇ ಮುಂದುವರಿಯಲು ಅವಕಾಶ ನೀಡಿರುವುದರಿಂದ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ ಎಂದು ಜಿಲ್ಲಾ ಸರ್ಜನ್‌ ಡಾ. ಪಿ.ಆರ್‌. ಹಾವನೂರ ತಿಳಿಸಿದ್ದಾರೆ.