ಸಾರಾಂಶ
ಜಿಲ್ಲೆಯಲ್ಲಿ ಈವರೆಗೆ ಆಗಿರುವ ಮಳೆ ಹಾನಿ ವಿವರವನ್ನು ಇಂದೇ ನೀಡಬೇಕು, ಮುಂದಿನ ದಿನಗಳಲ್ಲಿ ಹಾನಿಯಾದಲ್ಲಿ ವರದಿಯನ್ನು ಅಂದೆ ನೀಡಬೇಕು ಜೊತೆಗೆ ಸರ್ಕಾರವು ಅಧಿಸೂಚಿಸುತ್ತಿರುವ ರೀತಿಯಲ್ಲಿ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ತುರ್ತು ಕ್ರಮಗಳನ್ನು ವಹಿಸಬೇಕು. ಇತ್ತೀಚಿನ ಮಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 13 ಮನೆಗಳಿಗೆ ಹಾನಿಯಾಗಿದೆ,
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೇ 13 ರಿಂದ 19 ರವರೆಗೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿರುವ ಕಾರಣ ಜಿಲ್ಲೆಯಾದ್ಯಂತ ಕೆಲವು ಮನೆಗಳು ಬಿದ್ದು ಹೋಗಿವೆ ಹಾಗೂ ಜೀವ ಹಾನಿಯೂ ಆಗಿದೆ. ಈ ಬಗ್ಗೆ ತುರ್ತು ವರದಿಯನ್ನು ಪ್ರತಿನಿತ್ಯ ನೀಡುವ ಜೊತೆಗೆ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಮಳೆಹಾನಿ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆ ಹಾನಿಯ ಕುರಿತು ವರದಿ ಮಾಡುವಂತೆ ಸರ್ಕಾರ ಸೂಚಿಸಿದೆ ಎಂದರು.
ಪರಿಹಾರ ನೀಡಲು ಕ್ರಮಜಿಲ್ಲೆಯಲ್ಲಿ ಈವರೆಗೆ ಆಗಿರುವ ಮಳೆ ಹಾನಿ ವಿವರವನ್ನು ಇಂದೇ ನೀಡಬೇಕು, ಮುಂದಿನ ದಿನಗಳಲ್ಲಿ ಹಾನಿಯಾದಲ್ಲಿ ವರದಿಯನ್ನು ಅಂದೆ ನೀಡಬೇಕು ಜೊತೆಗೆ ಸರ್ಕಾರವು ಅಧಿಸೂಚಿಸುತ್ತಿರುವ ರೀತಿಯಲ್ಲಿ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ತುರ್ತು ಕ್ರಮಗಳನ್ನು ವಹಿಸಬೇಕು. ಇತ್ತೀಚಿನ ಮಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 13 ಮನೆಗಳಿಗೆ ಹಾನಿಯಾಗಿದೆ, ಇದರಲ್ಲಿ 11 ಮನೆಗಳು ಭಾಗಶಃ ಹಾಗೂ ಎರಡು ಮನೆಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿವೆ ಎಂದರು.
ಚಿಂತಾಮಣಿ ತಾಲೂಕಿನಲ್ಲಿ ಏಳು ಮನೆಗಳು, ಬಾಗೇಪಲ್ಲಿ ಮತ್ತು ಚೇಳೂರು ತಾಲೂಕಿನಲ್ಲಿ ತಲಾ ಎರಡು ಮನೆಗಳು ಮತ್ತು ಗುಡಿಬಂಡೆ, ಶಿಡ್ಲಘಟ್ಟ ತಾಲೂಕುಗಳಲ್ಲಿ ತಲಾ ಒಂದು ಮನೆ ಹಾನಿಗೊಳಗಾಗಿವೆ, ಬಾಗೇಪಲ್ಲಿ ತಾಲೂಕಿನಲ್ಲಿ 10 ಕುರಿಗಳು, ಗೌರಿಬಿದನೂರು ತಾಲೂಕಿನಲ್ಲಿ ಒಂದು ಕುರಿ ಸತ್ತಿವೆ, ಈ ಕುರಿಗಳ ಮಾಲೀಕರಿಗೆ ಸರ್ಕಾರದ ನಿಯಮಾವಳಿ ರೀತ್ಯ ಪರಿಹಾರಗಳನ್ನು ತುರ್ತಾಗಿ ನೀಡಬೇಕು ಎಂದು ತಿಳಿಸಿದರು.ಚಿಂತಾಮಣಿ ತಾಲ್ಲೂಕಿನಲ್ಲಿ 8.5 ಎಕರೆ ಮಾವಿನ ತೋಟ ಹಾಗೂ ಅರ್ಧ ಎಕರೆ ಚಂಡುಹೂವು ತೋಟ ಹಾನಿಯಾಗಿದೆ ಪರಿಹಾರ ಕ್ರಮಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶದ 38 ಗ್ರಾಮಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು ಈ ಪೈಕಿ 31 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರದಿಂದ ನೀರು ಪೂರೈಸಲಾಗುತ್ತಿದೆ ಉಳಿದ ಏಳು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ. ಟಿ ನಿಟ್ಟಾಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.