ಸಾರಾಂಶ
ತಾಲೂಕಿನ 13 ಹಳ್ಳಿಗಳ ಅಭಿವೃದ್ಧಿಗೆ ಗಣಿಬಾಧಿತ ಪ್ರದೇಶಗಳಿಗೆ ಇರುವ ವಿಶೇಷ ಹಣ ಬಳಸಿಕೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶಬಾಬು ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ 13 ಹಳ್ಳಿಗಳ ಅಭಿವೃದ್ಧಿಗೆ ಗಣಿಬಾಧಿತ ಪ್ರದೇಶಗಳಿಗೆ ಇರುವ ವಿಶೇಷ ಹಣ ಬಳಸಿಕೊಳ್ಳಲಾಗುವುದು ಎಂದು ಶಾಸಕ ಸಿ.ಬಿ.ಸುರೇಶಬಾಬು ಹೇಳಿದರು.ತಾಲೂಕಿನ ಕೂಪ್ಪುರು ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆವತಿಯಿಂದ ಏರ್ಪಡಿಸಲಾಗಿದ್ದ ಮತಿಘಟ್ಟ ಗೆಟ್ ನಿಂದ ಕೈ ಮರದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 2013ರಲ್ಲಿ ತಾಲೂಕಿನ ಸಂಪೂರ್ಣ ಅಭಿವೃದ್ದಿಗಾಗಿ 3 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈಗ ಗಣಿಬಾಧಿತ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 1200ಕೋಟಿ ಅನುದಾನ ಮಂಜೂರಾಗಿದ್ದು ಅದರಲ್ಲಿ 400ಕೋಟಿ ಹಣ ರಸ್ತೆಗಳ ಅಭಿವೃದ್ಧಿಗೆ ಹಂಚಿಕೆಯಾಗಿದೆ. ಉಳಿದಂತೆ ಮನೆ, ಕೃಷಿ, ಪಶುಸಂಗೋಪನೆ,ಅರಣ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದರು.
ಪಿಎಲ್ ಡಿಬ್ಯಾಂಕ್ ನ ನಿರ್ದೇಶಕ, ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಯ್ಯ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮಗಳ ಜನತೆ ಅನುಕೂಲವಾಗುತ್ತದೆ. ರಸ್ತೆಯನ್ನು ನಿರ್ಮಿಸುವ ವೇಳೆ ಸಾರ್ವಜನಿಕರು ಸ್ಪಂದಿಸಿ ಗುಣಮಟ್ಟದ ರಸ್ತೆಯನ್ನು ಮಾಡಿಸಿಕೊಳ್ಳಿ ಎಂದರು.ಲೋಕೊಪಯೋಗಿ ಇಲಾಖೆಯ ಎಇಇ ತಿಮ್ಮಯ್ಯ ಕುಪ್ಪೂರು ಗ್ರಾ.ಪಂ.ಅಧ್ಯಕ್ಷೆ ಸುಕನ್ಯಾ, ತಾಪಂ ಸದಸ್ಯೆ ಮಂಗಳಮ್ಮ, ಗ್ರಾಪಂ ಸದಸ್ಯರಾದ, ಕೃಷ್ಣಯ್ಯ, ಶಿವಕುಮಾರ್, ಹರೀಶ್ , ಚಂದ್ರಯ್ಯ, ಅಶೋಕಣ್ಣ ಇತರರಿದ್ದರು.