130 ಗಿಗಾವ್ಯಾಟ ವಿದ್ಯುತ್‌ ಉತ್ಪಾದನೆ ಗುರಿ: ಝಾ

| Published : Jul 20 2025, 01:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಎನ್‌ಟಿಪಿಸಿ ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು, 2032ರ ವೇಳೆಗೆ 130 GW (ಗಿಗಾವ್ಯಾಟ್) ಉತ್ಪಾದನೆ ನಮ್ಮ ಗುರಿಯಾಗಿದೆ ಎಂದು ಕೂಡಗಿ ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ.ಝಾ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎನ್‌ಟಿಪಿಸಿ ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು, 2032ರ ವೇಳೆಗೆ 130 GW (ಗಿಗಾವ್ಯಾಟ್) ಉತ್ಪಾದನೆ ನಮ್ಮ ಗುರಿಯಾಗಿದೆ ಎಂದು ಕೂಡಗಿ ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ.ಝಾ ಹೇಳಿದರು.

ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿಯ ಮಹಾಶಕ್ತಿನಗರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಗಿ ಎನ್‌ಟಿಪಿಸಿಯಲ್ಲಿ ಅತಿ ದೊಡ್ಡ ಸಿಂಗಲ್ ಸ್ಟೇಜ್ ಸ್ಟೇಷನ್ ಇದ್ದು, ಒಟ್ಟು 2400 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಎನ್‌ಟಿಪಿಸಿ ಘಟಕಗಳ ಮೊದಲ 800 ಮೆಗಾವ್ಯಾಟ್ ಸರಣಿಯ 3 ಸೂಪರ್‌ ಕ್ರಿಟಿಕಲ್ ಘಟಕಗಳನ್ನು ಒಳಗೊಂಡಿದೆ. ಮೊದಲ ಘಟಕ 2016 ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಿದ್ದು, 12 ರಾಜ್ಯಗಳ ಫಲಾನುಭವಿಗಳಿಗೆ 3.37 ಮೆಗಾವ್ಯಾಟ್‌ ನೀಡುತ್ತಿದೆ. ಕರ್ನಾಟಕ ಶೇ/50, ಆಂಧ್ರಪ್ರದೇಶ ಶೇ.8.37, ತಮಿಳುನಾಡು ಶೇ.12.5, ತೆಲಂಗಾಣ ಶೇ.9.75, ಕೇರಳ ಶೇ.4.37, ಪಂಜಾಬ್ ಶೇ.15 ವಿದ್ಯುತ್ ಹಂಚಿಕೆಯಾಗುತ್ತಿದೆ. 2018 ರಲ್ಲಿ ಎನ್‌ಟಿಪಿಸಿಯ ಮೊದಲ ಹೈಬ್ರಿಡ್ ಕೇಂದ್ರಗಳಾದ 2.0 ಮೆಗಾವ್ಯಾಟ್ ಪವನ ಮತ್ತು 1.37 ಮೆಗಾವ್ಯಾಟ್ ಸೌರ ಪಿವಿ ಸ್ಥಾವರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಮಾಜಕ್ಕೆ ಕೊಡುಗೆ ನೀಡಿದ ಎನ್‌ಟಿಪಿಸಿ ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಗೆ ಬದ್ಧವಾಗಿದೆ. ಮುಂದೆಯೂ ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಉತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿದೆ. ಜನರ ಜೀವನ ಬೆಳಗಿಸುವುದು, ಸಮುದಾಯಗಳನ್ನು ಸಬಲೀಕರಣಗೊಳಿಸುವ ಕೆಲಸ ಮುಂದುವರಿಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜನರಲ್ ಮ್ಯಾನೇಜರ್‌ಗಳಾದ ಸಂತೋಷ ತಿವಾರಿ, ಅಗಂ ಪ್ರಕಾಶ ತಿವಾರಿ, ಮಾನವ ಸಂಪನ್ಮೂಲ ಮುಖ್ಯಸ್ಥ ಕಲೈ ಮೂರ್ತಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪೂಜಾ ಪಾಂಡೆ ಉಪಸ್ಥಿತರಿದ್ದರು