ಸಾರಾಂಶ
ಶಿರಸಿ: ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸುಮಾರು 1300 ಎಕರೆ ಕೃಷಿ ಭೂಮಿ ಮುಳುಗುಡೆಯಾಗಿದೆ. ಬನವಾಸಿ ಭಾಗದ ರೈತರ ಜೀವನದಿಯಾದ ವರದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ನದಿತಟದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಸಿದ್ದಾಪುರ ತಾಲೂಕಿನ ಗಡಿಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವುದರಿಂದ ವರದಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ವರದಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.ತಾಲೂಕಿನ ಪೂರ್ವ ಭಾಗವಾದ ಅಜ್ಜರಣಿ, ಬಾಶಿ, ತಿಗಣಿ, ಮತ್ತಗುಣಿ, ಮೊಗವಳ್ಳಿ, ಯಡಗೊಪ್ಪ, ಯಡ್ರಬೈಲ್, ಹೊಸಕೇರಿ ಭಾಗದ ಸುಮಾರು ೧,೩೦೦ ಎಕರೆ ಜಮೀನು ಮುಳುಗಡೆಯಾಗಿದೆ. ಹೀಗೆ ಮಳೆ ಮುಂದುವರಿದರೆ ಮನೆಗಳಿಗೂ ನೀರು ನುಗ್ಗುವ ಸಂಭವವಿದೆ. ನದಿ ನೀರು ಏರಿಕೆಯಾದ ಕಾರಣ ಅಜ್ಜರಣಿ ಸೇತುವೆ ಜಲಾವೃತವಾಗಿದೆ. ಇದರಿಂದ ಸಂಚಾರ ಸ್ಥಗಿತವಾಗಿದೆ.
ಕೃಷಿ ಕಾರ್ಯ ಸ್ಥಗಿತ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ವರದಾ ನದಿಯಲ್ಲಿ ನೀರು ಉಕ್ಕಿ ತಗ್ಗು ಪ್ರದೇಶಗಳ ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ. ಗದ್ದೆ, ತೋಟಗಳಲ್ಲಿ ಸುಮಾರು ಐದಾರು ಅಡಿ ನೀರು ನಿಂತಿರುವುದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ: ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಜಲಾವೃತಗೊಂಡ ಸ್ಥಳಕ್ಕೆ ಶಿರಸಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಕಾಳಜಿ ಕೇಂದ್ರ ತೆರೆದು ಸಿದ್ಧತೆ ಕೈಗೊಂಡು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.